
ನವದೆಹಲಿ: ತೀವ್ರ ಪ್ರವಾಹ ಪೀಡಿತ ಕೇರಳ ರಾಜ್ಯದ ಪ್ರದೇಶಗಳಿಂದ 10 ಸಾವಿರಕ್ಕೂ ಹೆಚ್ಚು ಜನರನ್ನು ರಾಷ್ಟೀಯ ರಕ್ಷಣಾ ಮೀಸಲು ಪಡೆಯ ಸಿಬ್ಬಂದಿ(ಎನ್ ಡಿಆರ್ ಎಫ್) ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ದೇಶದಲ್ಲಿ ಇದುವರೆಗೆ ಎನ್ ಡಿಆರ್ ಎಫ್ ನಡೆಸಿದ ಅತಿದೊಡ್ಡ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೇರಳದ್ದಾಗಿದೆ.
ಆಗಸ್ಟ್ 8ರಿಂದ ಕೇರಳದಲ್ಲಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 194ಕ್ಕೇರಿದೆ. ಒಟ್ಟು 58 ರಕ್ಷಣಾ ತಂಡ ಕಾರ್ಯಕ್ಕೆ ನಿಯೋಜಿತವಾಗಿದ್ದು ಅವರಲ್ಲಿ 55 ತಂಡಗಳು ಈಗಾಗಲೇ ಕಾರ್ಯನಿರತವಾಗಿದ್ದು ಇನ್ನು ಮೂರು ತಂಡಗಳು ಆಗಮಿಸುತ್ತಿವೆ ಎಂದು ಎನ್ ಡಿಆರ್ ಎಫ್ ವಕ್ತಾರರು ತಿಳಿಸಿದ್ದಾರೆ.
ಇದುವರೆಗೆ ತಂಡ 190ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದೆ. 10,467 ಮಂದಿಯನ್ನು ಮತ್ತು 12 ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದಾರೆ. 159 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಕೂಡ ಕಾರ್ಯಾಚರಣೆ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಎನ್ ಡಿಆರ್ ಎಫ್ ತಂಡ ಪ್ರಸ್ತುತ ಕೇರಳದ ತ್ರಿಶೂರು, ಪಥನಂತಿಟ್ಟಾ (13), ಅಲಪುಳಾ (11), ಎರ್ನಾಕುಲಂ (5), ಇಡುಕ್ಕಿ (4), ಮಲ್ಲಪುರಂ (3), ವಯನಾಡು ಮತ್ತು ಕೊಜಿಕ್ಕೋಡ್ ಗಳಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
ದಿನಪೂರ್ತಿ ನಿಯಂತ್ರಣಾ ಕೊಠಡಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದು ಪ್ರವಾಹಪೀಡಿತರಿಗೆ ಬೇರೆ ಮಾರ್ಗಗಳ ಮೂಲಕ ಕೂಡ ನೆರವು ಒದಗಿಸಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣೆ ನಿಯಂತ್ರಣ ಕೊಠಡಿಯ ಮಾಹಿತಿ ಪ್ರಕಾರ, ಆಗಸ್ಟ್ 8ರಿಂದ ರಾಜ್ಯದಲ್ಲಿ 194 ಮಂದಿ ಮೃತಪಟ್ಟಿದ್ದು, 36 ಮಂದಿ ಕಾಣೆಯಾಗಿದ್ದಾರೆ. 3.14 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತ ತಾಣಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಮುಖ್ಯಮಂತ್ರಿ ಕಚೇರಿಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಆಗಸ್ಟ್ 8ರಿಂದ 173 ಮಂದಿ ಜೀವ ಕಳೆದುಕೊಂಡಿದ್ದು ಮೇ 29ರಿಂದ ರಾಜ್ಯದಲ್ಲಿ ಮಳೆ ಸಂಬಂಧಿತ ಅವಘಡಗಳಿಗೆ 324 ಮಂದಿ ಬಲಿಯಾಗಿದ್ದಾರೆ.
ಈ ವಾರಾಂತ್ಯ ರಾಜ್ಯದಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.ಕಾಸರಗೋಡು ಮತ್ತು ತಿರುವನಂತಪುರ ಹೊರತುಪಡಿಸಿ ಬೇರೆಲ್ಲಾ ಜಿಲ್ಲೆಗಳಿಗೆ ತೀವ್ರ ಕಟ್ಟೆಚ್ಚರ ವಿಧಿಸಲಾಗಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಕೇರಳ ರಾಜ್ಯದ ಪ್ರವಾಹ ಸಂತ್ರಸ್ತ ಜಿಲ್ಲೆಗಳಿಗೆ 500 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದರು. ಆದರೆ 1.3 ಸಾವಿರ ಕೋಟಿ ರೂಪಾಯಿ ನೆರವಿನ ಅಗತ್ಯವಿದೆ ಎಂದು ಕೇರಳ ಸರ್ಕಾರ ಹೇಳುತ್ತಿದೆ.
Advertisement