ವಿಚಾರವಾದಿ ನರೇಂದ್ರ ಧಾಬೋಲ್ಕರ್ ಹತ್ಯೆ: ಶಂಕಿತ ಪ್ರಮುಖ ಆರೋಪಿ ಬಂಧನ
ವಿಚಾರವಾದಿ, ಪ್ರಗತಿಪರ ಚಿಂತಕ ಮಹಾರಾಷ್ಟ್ರದ ನರೇಂದ್ರ ಧಾಬೋಲ್ಕರ್ ಅವರ ಹತ್ಯೆ ಪ್ರಕರಣ ಸಂಬಂಧ ಶಂಕಿತ ಪ್ರಮುಖ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ: ವಿಚಾರವಾದಿ, ಪ್ರಗತಿಪರ ಚಿಂತಕ ಮಹಾರಾಷ್ಟ್ರದ ನರೇಂದ್ರ ಧಾಬೋಲ್ಕರ್ ಅವರ ಹತ್ಯೆ ಪ್ರಕರಣ ಸಂಬಂಧ ಶಂಕಿತ ಪ್ರಮುಖ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಶಂಕಿತನನ್ನು ಸಚಿನ್ ಪ್ರಕಾಶರಾವ್ ಅಂದುರೆ ಎಂದು ಗುರುತಿಸಲಾಾಗಿದ್ದು, ಶನಿವಾರ ಔರಂಗಾಬಾದ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಧಾಭೋಲ್ಕರ್ ಹತ್ಯೆಯಾದ ಐದು ವರ್ಷ ಬಳಿಕ ಈತ ಸರೆ ಸಿಕ್ಕಿದ್ದು, ಪ್ರಕರಣದ ತನಿಖೆ ಚುರುಕು ಪಡೆದುಕೊಂಡಂತಾಗಿದೆ.
ಪುಣೆಯಲ್ಲಿ 2013ರ ಆಗಸ್ಟ್ 20ರಂದು ನಡೆದ ಪ್ರಕರಣದಲ್ಲಿ ಧಾಬೋಲ್ಕರ್ ಮೇಲೆ ಗುಂಡಿನ ದಾಳಿ ನಡೆಸಿ ಭೀಕರವಾಗಿ ಕೊಲೆಗೈಯಲಾಗಿತ್ತು. ದುಷ್ಕರ್ಮಿಗಳ ಪೈಕಿ ಅಂದುರೆ ಪ್ರಧಾನ ಶೂಟರ್ ಆಗಿರುವ ಸಾಧ್ಯತೆಗಳಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳ ಪಡಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ವಿಚಾರವಾದಿ ಧಾಬೋಲ್ಕರ್ ಹತ್ಯೆಯ ಬಳಿಕ 2015ರ ಫೆಬ್ರವರಿ 16ರಂದು ಕೊಲ್ಹಾಪುರದಲ್ಲಿ ಮತ್ತೊಬ್ಬ ಚಿಂತಕ ಗೋವಿಂದ ಪನ್ಸಾರೆ ಅವರ ಹತ್ಯೆ ಮಾಡಲಾಗಿತ್ತು. ಈ ಎರಡೂ ಹತ್ಯೆ ಪ್ರಕರಣಗಳ ತನಿಖೆ ವಿಳಂಬ ಗತಿಯಲ್ಲಿ ಸಾಗುತ್ತಿರುವ ಬಗ್ಗೆ ಬಾಂಬೆ ಹೈಕೋರ್ಟ್ ಇತ್ತೀಚೆಗಷ್ಟೇ ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಅಂದುರೆಯ ಬಂಧನವಾಗಿದೆ.