ಭೂಪಾಲ್ : ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ನಾಥ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗಿದೆ. ಉಪಮುಖ್ಯಮಂತ್ರಿಯನ್ನಾಗಿ ಯಾರನ್ನೂ ಘೋಷಣೆ ಮಾಡಿಲ್ಲ.
ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯ ನಂತರ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಯ್ಕೆ ಮಾಡಿದ್ದಾರೆ.
ದೆಹಲಿಯ ರಾಹುಲ್ ಗಾಂಧಿ ನಿವಾಸದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದ ಕಮಲ್ ನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಅವರೊಂದಿಗೆ ಯುಪಿಎ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಸುಧೀರ್ಘ ಚರ್ಚೆ ನಡೆಸಿದರು.
ನಂತರ ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಸಲಹೆ ಪಡೆದು ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯಾಗಿ ರಾಹುಲ್ ಗಾಂಧಿ ಆಯ್ಕೆ ಮಾಡಿದ್ದಾರೆ. ಇದರಂತೆ ಡಿ.17ರಂದು ಕಮಲ್ ನಾಥ್ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಕಮಲ್ ನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ದೆಹಲಿಯಿಂದ ಭೂಪಾಲ್ ಗೆ ವಾಪಾಸ್ಸಾದ ನಂತರ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.