ನೋಯ್ಡಾ: ಕಚೇರಿಯಲ್ಲಿ ಸಹೋದ್ಯೋಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಜೆನ್ ಪ್ಯಾಕ್ಟ್ ಐಟಿ ಕಂಪನಿಯ ಸಹಾಯಕ ಉಪಾಧ್ಯಕ್ಷ ಸ್ವರೂಪ್ ರಾಜ್ ಅವರು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಬ್ಬರು ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ವರೂಪ್ ಅವರನ್ನು ಸಹಾಯಕ ಉಪಾಧ್ಯಕ್ಷ ಹುದ್ದೆಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
ಲೈಂಗಿಕ ಕಿರುಕುಳ ಆರೋಪದಿಂದ ನೊಂದ 35 ವರ್ಷದ ಸ್ವರೂಪ್ ಅವರು ಇಂದು ನೋಯ್ಡಾದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರ. ಅದನ್ನು ಎದುರಿಸುವ ಧೈರ್ಯ ನನ್ನಲ್ಲಿಲ್ಲ ಎಂದು ಸ್ವರೂಪ್ ತಮ್ಮ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ ಎಂದು ಗೌತಮ್ ಬುದ್ಧ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಹೇಳಿದ್ದಾರೆ.