ಅಮರಾವತಿ: 2018-19ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ನೀಡಿದ ಕೇಂದ್ರ ಸರ್ಕಾರ ನಿರ್ಧಾರ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಗುರುವಾರ ಆಂಧ್ರ ಪ್ರದೇಶ ಬಂದ್ ಕರೆ ನೀಡಿದ್ದು, ಬಂದ್ ನಿಂದಾಗಿ ರಾಜ್ಯಾದ್ಯಂತ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಆಂಧ್ರ ಪ್ರದೇಶ ಪುನರ್ ಸಂಘಟನೆ ಕಾಯಿದೆ ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಮತ್ತು ಕೇಂದ್ರ ಬಜೆಟ್ ನಲ್ಲಿ ಕಡಿಮೆ ಅನುದಾನ ಒದಗಿಸಿರುವುದನ್ನು ಖಂಡಿಸಿ ವೈಎಸ್ ಆರ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.
ಒಂದು ದಿನದ ಬಂದ್ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಯ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಶಾಲೆ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ರಾಜ್ಯಾದ್ಯಂತ ಬಂದ್ ಶಾಂತಿಯುತವಾಗಿ ನಡೆಯುತ್ತಿದ್ದು, ಬಂದ್‌ನಿಂದಾಗಿ ಯಾವುದೇ ಸರ್ಕಾರಿ ಬಸ್ ರಸ್ತೆಗಿಳಿದಿಲ್ಲ ಎಂದು ವರದಿಗಳು ತಿಳಿಸಿವೆ.
ಈ ಮಧ್ಯೆ ಬಿಜೆಪಿ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷ ಸಹ ರಾಜ್ಯದ ಹಕ್ಕುಗಳಿಗಾಗಿ ಇಂದು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಾದ್ಯಂತ ತನ್ನ ಸಂಸದರಿಗೆ ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುವ ರ್ಯಾಲಿಗಳನ್ನು ನಡೆಸುತ್ತಿದೆ.
ಈ ಹೋರಾಟಕ್ಕಾಗಿ ರಾಜ್ಯದ ಜನರು ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದು ಟಿಡಿಪಿ ಅಧ್ಯಕ್ಷ ಹಾಗೂ ಇಂಧನ ಸಚಿವ ಕಿಮಿಡಿ ಕಲಾ ವೆಂಕಟ ರಾವ್ ಕರೆ ನೀಡಿದ್ದಾರೆ.