ಸೂಪರ್ ಸ್ಟಾರ್ ನಟ ರಜನಿಕಾಂತ್
ದೇಶ
ಕರ್ನಾಟಕದಿಂದ ನೀರು ಪಡೆಯಲು ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿ; ನಟ ರಜನಿಕಾಂತ್ ವಿರುದ್ಧ ಸಚಿವ ಕಿಡಿ
ತಮಿಳುನಾಡು ರಾಜ್ಯದಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ಹೇಳಿದ್ದ ಸೂಪರ್ ಸ್ಟಾರ್ ನಟ ರಜನಿಕಾಂತ್ ವಿರುದ್ದ ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ಅವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ...
ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ಹೇಳಿದ್ದ ಸೂಪರ್ ಸ್ಟಾರ್ ನಟ ರಜನಿಕಾಂತ್ ವಿರುದ್ದ ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ಅವರು ಶುಕ್ರವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾವೇರಿ ನೀರು ಹಂಚಿಕೆ ಮಾಡಿಕೊಳ್ಳಲು ಕರ್ನಾಟಕ ನಿರಾಕರಿಸುತ್ತಿದ್ದು, ಈ ಮೂಲಕ ನಮ್ಮ ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದೆ. ಕಾವೇರಿ ನದಿಯ ಡೆಲ್ಟಾ ಪ್ರದೇಶದಲ್ಲಿರುವ ನಿವಾಸಿಗಳಿಗೆ ಮುಖ್ಯವಾದ ಉದ್ಯೋಗ ಕೃಷಿಯಾಗಿದ್ದು, ಡೆಲ್ಟಾ ಜಿಲ್ಲೆಗಳಲ್ಲಿ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಬೆಳೆಗಳನ್ನು ಉಳಿಸಲು ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವ ಮೂಲಕ ರಜನಿಕಾಂತ್ ಅವರು ಮೊದಲು ಕರ್ನಾಟಕ ವ್ಯವಸ್ಥೆಯನ್ನು ಸರಿಪಡಿಸಲಿ ಎಂದು ಹೇಳಿದ್ದಾರೆ.
ರಜನಿಕಾಂತ್ ಅವರು ಸೂಕ್ತ ರೀತಿಯಲ್ಲಿ ಆರೋಪಗಳನ್ನು ಮಾಡಬೇಕು. ನಮ್ಮಿಂದ ಯಾವುದೇ ತಪ್ಪಾಗಿದ್ದರೂ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ತಮಿಳುನಾಡಿನಲ್ಲಿ ಯಾವ ವ್ಯವಸ್ಥೆ ಸರಿಯಿಲ್ಲ ಎಂಬುದನ್ನು ನಟ ಸ್ಪಷ್ಟಪಡಿಸಲಿ. ಅಮ್ಮ ಸರ್ಕಾರದಂತೆ ನೋಡಿದರೆ, ಎಲ್ಲವೂ ಸರಿಯಾಗಿದೆ. ರಾಜ್ಯದಲ್ಲಿ ವ್ಯವಸ್ಥೆ ಸರಿಯಿದ್ದರಿಂದ, ಜನಪರ ಕಲ್ಯಾಣ ಯೋಜನೆಗಳು ಸರಿಯಿದ್ದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಜಯಲಲಿತಾ ಅವರು ಭರ್ಜರಿ ಜಯ ಸಾಧಿಸಿದ್ದರು. ಉತ್ತರ ಭಾರತದಲ್ಲಿ ಭಯೋತ್ಪಾದಕರಿದ್ದು, ರಜನಿಕಾಂತ್ ಅವರು ಅಲ್ಲಿಗ ಹೋಗಿ, ವ್ಯವಸ್ಥೆಯನ್ನು ಸರಿಪಡಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ