

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಉಗ್ರರ ದಾಳಿ ಮುಂದುವರೆದಿದ್ದು, ಯುದ್ದವೊಂದೇ ಪರಿಹಾರವಲ್ಲಾ ಎಂದು ಮುಖ್ಯಮಂತ್ರಿ ಮೆಹಾಬೂಬಾ ಮುಫ್ತಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿಂದು ಮಾತನಾಡಿದ ಅವರು,ಪಾಕಿಸ್ತಾನ ವಿರುದ್ಧದ ಎಲ್ಲಾ ಯುದ್ದಗಳಲ್ಲಿಯೂ ನಾವೂ ಗೆಲುವು ಸಾಧಿಸಿದ್ದೀವಿ. ಆದರೆ, ಇಂದಿಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲ. ಸಾವಿನಿಂದ ನಮ್ಮ ಯೋಧರು ಹಾಗೂ ನಾಗರಿಕರನ್ನು ಪಾರು ಮಾಡುವುದು ಹೇಗೆ ಎಂಬುದು ಚಿಂತೆಗೀಡು ಮಾಡಿದೆ ಎಂದರು.
ರಕ್ತಪಾತಕ್ಕೆ ಕೊನೆಹಾಡಬೇಕಾದರೆ, ಪಾಕಿಸ್ತಾನದೊಂದಿಗೆ ಮಾತುಕತೆ ಅಗತ್ಯ. ಆದರೆ, ಹೀಗೆ ಮಾಡಿದ್ದರೆ ರಾತ್ರೋರಾತ್ರಿ ರಾಷ್ಟ್ರ ವಿರೋಧಿ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ. ನರಳುತ್ತಿರುವ ಜಮ್ಮು ಮತ್ತು ಕಾಶ್ನೀರದ ಜನತೆಗಾಗಿ ಮಾತನಾಡಲೇಬೇಕಿದೆ, ಏಕೆಂದರೆ ಯುದ್ಧವೊಂದೇ ಪರಿಹಾರ ಅಲ್ಲ ಎಂದರು.
ಸುಂಜುವಾನ್ ಸೇನಾ ಶಿಬಿರದ ಮೇಲಿನ ದಾಳಿ ನಂತರ ಶ್ರೀನಗರದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಅರೆಸೇನಾಪಡೆಯ ಸಿಬ್ಬಂದಿಯೊಬ್ಬ ಹುತಾತ್ಮರಾಗಿದ್ದಾರೆ.