ಚೆನ್ನೈ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಅಸಮಾಧಾನಗೊಂಡಿರುವ ತಮಿಳುನಾಡು ಆಡಳಿತ ಪಕ್ಷ ಎಐಎಡಿಎಂಕೆ, ತನ್ನ ಸರ್ಕಾರ ತಮಿಳುನಾಡು ಪಾಲಿನ ನೀರಿಗಾಗಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದೆ.
ಇನ್ನು ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ಡಿಎಂಕೆ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಹಿನ್ನಡೆಯಾಗಿದೆ ಎಂದು ಆರೋಪಿಸಿದೆ.
ಕಾವೇರಿ ನೀರಿನಲ್ಲಿ ತನ್ನ ನ್ಯಾಯಯುತ ಪಾಲನ್ನು ಪಡೆಯಲು ತಮಿಳುನಾಡು ಸರ್ಕಾರದ ಪ್ರಯತ್ನ ಮುಂದುವರೆಯಲಿದೆ ಎಂದು ಎಐಎಡಿಎಂಕೆ ಸಂಸದ ಎಂ ನವನೀತ್ ಕೃಷ್ಣನ್ ಅವರು ಹೇಳಿದ್ದಾರೆ. ಅಲ್ಲದೆ ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ತೀವ್ರ ಕುತೂಹಲ ಮೂಡಿಸಿದ್ದ ಬಹು ನಿರೀಕ್ಷಿತ ಕಾವೇರಿ ತೀರ್ಪು ಇಂದು ಪ್ರಕಟವಾಗಿದ್ದು, ತಮಿಳುನಾಡಿಗೆ ಹರಿಸಬೇಕಿರುವ ನೀರಿನ ಪ್ರಮಾಣವನ್ನು 177.2 ಟಿಎಂಸಿಗೆ ಇಳಿಕೆ ಮಾಡಿದೆ. ಆ ಮೂಲಕ ಕರ್ನಾಟಕಕ್ಕೆ ಈ ಹಿಂದೆ ಹಂಚಿಕೆ ಮಾಡಿದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡಲಾಗಿದೆ.