ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಕೇಜ್ರಿವಾಲ್ ಪರ ವಕೀಲರು ತಾನು ಪ್ರಕರಣದ ಪರ ವಾದಿಸುವುದಿಲ್ಲ ಎಂದಿದ್ದಾರೆ.
ಅರವಿಂದ ಕೇಜ್ರಿವಾಲ್ ಪರ ವಕೀಲರಾದ ಅನೂಪ್ ಜಾರ್ಜ್ ಚೌಧರಿ ತಾವಿನ್ನು ಮಾನನಷ್ಟ ಮೊಕದ್ದಮೆ ಪ್ರಕರಣದ ವಾದಮಂಡನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಮುಖಂಡರಾದ ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ್ ಸಿಂಗ್, ರಾಘವ್ ಚಧಾ ಮತ್ತು ದೀಪಕ್ ಬಾಜಪೇಯಿ ಅವರ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಡಿಸೆಂಬರ್ 2015ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಕೇಜ್ರಿವಾಲ್ ಮತ್ತು ಇತರರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅನ್ನೊಳಗೊಂಡ ಪ್ರಕರಣದಲ್ಲಿ ಸುಳ್ಳು ಮತ್ತು ಮಾನಹಾನಿಯಾಗುವಂತಹಾ ಹೇಳಿಕೆಗಳನ್ನು ನೀಡಿದ್ದರು ಮತ್ತು ಅವರ ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡಿದ್ದಾರೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದ್ದ ಜೇಟ್ಲಿ ಹತ್ತು ಕೋಟಿ ರೂ. ಪರಿಹಾರಕ್ಕಾಗಿ ಆಗ್ರಹಿಸಿದ್ದರು.