ಸುಕ್ಮಾದಲ್ಲಿ ನಕ್ಸಲರ ಅಟ್ಟಹಾಸ: ಇಬ್ಬರು ಯೋಧರು ಹುತಾತ್ಮ, 6 ಜನರಿಗೆ ಗಾಯ
ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಭೇಜಿ ಎಂಬ ಪ್ರದೇಶದಲ್ಲಿ ನಕ್ಸಲರು ಅಟ್ಟಹಾಸ ಮರೆದಿದ್ದು, ನಕ್ಸಲರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿ, 6 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ...
ಬಸ್ತಾರ್(ಛತ್ತೀಸ್ಗಢ): ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಭೇಜಿ ಎಂಬ ಪ್ರದೇಶದಲ್ಲಿ ನಕ್ಸಲರು ಅಟ್ಟಹಾಸ ಮರೆದಿದ್ದು, ನಕ್ಸಲರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿ, 6 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ದಕ್ಷಿಣ ಬಸ್ತಾರ್ ನ ಪೊಲೀಸ್ ಅಧಿಕಾರಿ ಸುಂದರ್ ರಾಜ್. ಪಿ ಮಾತನಾಡಿ, ಇಬ್ಬರು ಸಹಾಯಕ ಪೇದೆಗಳಾದ ಮಡ್ಕಮ್ ಹಂದ ಮತ್ತು ಮುಕೇಶ್ ಕಡ್ತಚಿ ಎಂಬುವವರು ನಕ್ಸಲ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.
ಭೇಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಪಡೆ, ಜಿಲ್ಲಾ ಮೀಸಲು ಪಡೆಗಳು ಹಾಗೂ ಸ್ಥಳೀಯ ಪೊಲೀಸರು ನಕ್ಸಲರ ವಿರುದ್ಧ ಎನ್ ಕೌಂಟರ್ ನಡೆಸುತ್ತಿದ್ದರು. ಈ ವೇಳೆ ನಕ್ಸಲರು ಭದ್ರತಾ ಪಡೆಗಳ ಮೇಲೆ ಏಕಾಏಕೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಪರಿಣಾಮ ದಾಳಿಯಲ್ಲಿ ಇಬ್ಬರು ವಿಶೇಷ ಕಾರ್ಯಾಚರಣೆ ಪಡೆಯ ಯೋಧರು ಹಾಗೂ ನಾಲ್ವರು ಜಿಲ್ಲಾ ಮೀಸಲು ಪಡೆಯ ಯೋಧರು ಗಾಯಗೊಂಡಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಯೋಧರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
ಗಾಯಗೊಂಡ ಯೋಧರನ್ನು ಸಲ್ವಾನ್ ರಾಜ, ಚಾಪಾ ರಾಕೇಶ್, ಶಿವರಾಮ್ ಸೋನಿ, ಪದಮ್ ಸೋಯಮ್, ರೂಪ್ ಸಿಂಗ್ ಪೋಯಮ್ ಮತ್ತು ಸೊಧಿ ಬಚ್ಚಾ ಎಂದು ಗುರ್ತಿಸಲಾಗಿದೆ.
ಭೇಜಿ ಮತ್ತು ಎಲರ್ಮಡ್ಗು ನಡುವೆ ಸರ್ಕಾರ ರಸ್ತೆ ನಿರ್ಮಾಣ ಯೋಜನೆಯನ್ನು ಕೈಗೊಂಡಿದ್ದು, ಇದಕ್ಕೆ ನಕ್ಸಲರು ತೀವ್ರ ವಿರೋಧ ವ್ಯಕ್ತಪಡಿಸಿ ರಸ್ತೆ ನಿರ್ಮಾಣ ಕಾರ್ಯಗಳು ನಡೆಯದಂತೆ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಯೋಜನೆಯ ಖಾಸಗಿ ಗುತ್ತಿಗೆದಾರ ಅನಿಲ್ ಕುಮಾರ್ ಎಂಬಾತನನ್ನು ಹತ್ಯೆ ಮಾಡಿದ್ದರು ಎಂದಿದ್ದಾರೆ.
ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿರುವ ಕಂಪನಿಯ ಕಾರ್ಮಿಕರು ಮಾತನಾಡಿ, 3-4 ನಕ್ಸಲರು ದಾಳಿ ನಡೆಸಿದ್ದರು. ನಕ್ಸಲರು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ನಾವು ಸ್ಥಳದಿಂದ ಪರಾರಿಯಾಗಿದ್ದೆವು. ಓಡುತ್ತಿದ್ದ ವೇಳೆ 3-4 ನಕ್ಸಲರನ್ನು ನೋಡಿದ್ದೆವು. ಬಳಿಕ ಸ್ಥಳದಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಎನ್'ಕೌಂಟರ್'ನಲ್ಲಿ 20ಕ್ಕೂ ಹೆಚ್ಚು ನಕ್ಸಲರ ಹತ್ಯೆ: ಡಿಜಿ ಅವಾಸ್ತಿ
ಸುಕ್ಮಾ ಜಿಲ್ಲೆಯಲ್ಲಿ ನಡೆಸಲಾದ ಎನ್'ಕೌಂಟರ್ ನಲ್ಲಿ 20ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ನಕ್ಸಲರ ವಿರುದ್ಧ ಕಾರ್ಯಾಚರಣೆಯ ವಿಶೇಷ ಡಿಜಿ ಡಿ.ಎಂ. ಅವಾಸ್ತಿಯವರು ಹೇಳಿದ್ದಾರೆ.
5 ಗಂಟೆಗೂ ಹೆಚ್ಚು ಕಾಲ ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಈ ವೇಳೆ ನಕ್ಸಲರು ಭದ್ರತಾ ಪಡೆಗಳ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದರು. ದಾಳಿಗೆ ದಿಟ್ಟ ಉತ್ತರನೀಡಿ 20ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಲಾಯಿತು. ಎನ್'ಕೌಂಟರ್ ನಲ್ಲಿ ನಮ್ಮ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ.