ಗೋರಕ್ಷಕರಿಂದ ದಾಳಿ, ಪತ್ರಕರ್ತರಿಗೆ ಬೆದರಿಕೆ; ಅಮ್ನೆಸ್ಟಿ ತೀವ್ರ ಖಂಡನೆ

ಗೋರಕ್ಷಣೆ ಹೆಸರಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ದಾಳಿ ಮತ್ತು ಪತ್ರಕರ್ತರಿಗೆ ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಗೋರಕ್ಷಣೆ ಹೆಸರಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ದಾಳಿ ಮತ್ತು ಪತ್ರಕರ್ತರಿಗೆ ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. 
ಈ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ, ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಅನಗತ್ಯ ಭೀತಿ ಹುಟ್ಟಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೇಳಿದೆ. ಅಲ್ಲದೆ ದೇಶದಲ್ಲಿ ಅಭಿವ್ಯಕ್ತಿ  ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಭಾರತೀಯ ಅಧಿಕಾರಿಗಳು ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಪತ್ರಕರ್ತರಿಗೂ ಬೆದರಿಕೆ ಒಡ್ಡುತ್ತಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಮಾನವಹಕ್ಕುಗಳ ಸ್ಥಿತಿಗತಿ ತೀರಾ  ಶೋಚನೀಯವಾಗಿದ್ದು, ಭಾರತದಲ್ಲಿ ಗೋಮಾಂಸ ಭಕ್ಷಣೆ ನೆಪದಲ್ಲಿ ಗೋರಕ್ಷಕರಿಂದ ಹಲ್ಲೆ ಮತ್ತು ಹತ್ಯೆ ಘಟನೆಗಳು ಹೆಚ್ಚುತ್ತಿವೆ ಎಂದು ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ವಿವರಿಸಲಾಗಿದೆ.
"ಕನಿಷ್ಠ 10 ಮಂದಿ ಮುಸ್ಲಿಮರನ್ನು ಹತ್ಯೆ ಮಾಡಲಾಗಿದ್ದು, ಹಲವು ಮಂದಿಯ ಮೇಲೆ ಗೋರಕ್ಷಕ ಗುಂಪುಗಳು ಹಲ್ಲೆ ನಡೆಸಿವೆ. ಇವರು ಆಡಳಿತಾರೂಢ ಬಿಜೆಪಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವಂತೆ ಕಾಣುತ್ತಿದೆ. ಪತ್ರಕರ್ತರಿಗೆ  ಬೆದರಿಕೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಕೂಡಾ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಹಲವು ಮಂದಿ ಪತ್ರಕರ್ತರು ಹಾಗೂ ಮಾನವಹಕ್ಕು ರಕ್ಷಕರು ಜೀವ ಕಳೆದುಕೊಂಡಿದ್ದಾರೆ. ವಿಶ್ವ  ವಿದ್ಯಾನಿಲಯಗಳಲ್ಲಿ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಬಂದೊದಗಿದೆ. ಹಿಂದೂ ರಾಷ್ಟ್ರೀಯವಾದ ಮತ್ತು ಜಾತಿಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನಲ್ಲಿ ಮನೆಯ ಮುಂದೆಯೇ  ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಲವು ಪತ್ರಕರ್ತರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. 
ಇದೇ ವೇಳೆ ಪರೋಕ್ಷವಾಗಿ ಪದ್ಮಾವತ್ ಚಿತ್ರ ಪ್ರತಿಭಟನೆ ಕುರಿತು ವರದಿಯಲ್ಲಿ ಹೆಸರು ಉಲ್ಲೇಖಿಸದೇ ಖಂಡನೆ ವ್ಯಕ್ತಪಡಿಸಿದ್ದು, "ಪ್ರತಿಗಾಮಿ ಕಾನೂನುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಲು ಬಳಸಲಾಗುತ್ತಿದ್ದು,  ರಾಜ್ಯ ಸರ್ಕಾರಗಳು ಪುಸ್ತಕಗಳನ್ನು ನಿಷೇಧಿಸುತ್ತಿದೆ. ಅಂತೆಯೇ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಚಿತ್ರಗಳ ಬಿಡುಗಡೆಗೆ ವಿನಾಕಾರಣ ಅವಕಾಶ ನಿರಾಕರಿಸುತ್ತಿದೆ" ಎಂದು ವರದಿಯಲ್ಲಿ  ಆರೋಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com