ಪಣಜಿ: ಕಡಿಮೆ ರಕ್ತದೊತ್ತಡ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಗೋವಾ ಮುಖ್ಯಂತ್ರಿ ಮನೋಹರ ಪರಿಕ್ಕರ್ ಐದು ದಿನಗಳ ತರುವಾಯ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
"ಮುಖ್ಯಮಂತ್ರಿಗಳು ಆಸ್ಪತ್ರೆಯಿಂದ ಮನೆಗೆ ಮರಳಿದ್ದು ಇದೀಗ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ" ಎಂದು ಮುಖ್ಯಮಂತ್ರಿಗಳ ಕಛೇರಿಯ ಅಧಿಕೃತ ಮೂಲಗಳು ಹೇಳಿದೆ.
ಈ ಹಿಂದೆ ಅನಾರೋಗ್ಯದ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಪರಿಕ್ಕರ್ ಫೆ.22ಕ್ಕೆ ಗೋವಾಗೆ ಮರಳಿದ್ದರು. ರಾಜ್ಯ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಮತ್ತೆ ಫೆ. 25ರಂದು ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು.
ಗೋವಾ ಮುಖ್ಯಮಂತ್ರಿಗಳ ಆರೋಗ್ಯಕ್ಕಾಗಿ ಕರಾವಳಿ ರಾಜ್ಯದ ಬಿಜೆಪಿ ಮುಖಂಡರು ಮಹಾ ಮೃತ್ಯುಂಜಯ ಜಪ ನಡೆಸುತ್ತಿದ್ದಾರೆ ಅಲ್ಲದೆ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸುತ್ತಿದ್ದಾರೆ.