ಡೊಕ್ಲಾಮ್ ನಂತರ, ಮತ್ತೆ ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಸೇನೆ ಮುಖಾಮುಖಿ?

ಡೊಕ್ಲಾಮ್ ವಿವಾದದ ನಂತರ ಭಾರತ ಮತ್ತು ಚೀನಾ ದೇಶದ ಭದ್ರತಾಪಡೆ ಕಳೆದೊಂದು ವಾರದಿಂದ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಬಿಶಿಂಗ್ ಸಮೀಪ ಮುಖಾಮುಖಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗುವಾಹಟಿ/ನವದೆಹಲಿ: ಡೊಕ್ಲಾಮ್ ವಿವಾದದ ನಂತರ ಭಾರತ ಮತ್ತು ಚೀನಾ ದೇಶದ ಭದ್ರತಾಪಡೆ ಕಳೆದೊಂದು ವಾರದಿಂದ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಬಿಶಿಂಗ್ ಸಮೀಪ ಮುಖಾಮುಖಿ ಯುದ್ಧಕ್ಕೆ ಸಜ್ಜಾಗಿದೆ ಎಂದು ಭದ್ರತಾ ಪಡೆ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. 
ಬುಲ್ಡೊಝರ್ ಸಹಾಯದಿಂದ ಚೀನಾದ ರಸ್ತೆ ನಿರ್ಮಾಣ ತಂಡ ಭಾರತದೊಳಗೆ ಪ್ರವೇಶಿಸಿದೆ ಎಂದು ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನೆಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ಗಡಿಯಲ್ಲಿ ನಿಯೋಜನೆಗೊಂಡು ಸಂಘರ್ಷಕ್ಕೆ ಸಜ್ಜಾಗಿವೆ.
ಟ್ಯೂಟಿಂಗ್ ನಿಂದ ಮುಂದೆ ಸ್ಥಳವೊಂದರಲ್ಲಿ ನನ್ನ ಸ್ನೇಹಿತರು ವಾಹನ ಚಲಾಯಿಸುತ್ತಿದ್ದರು. ಅಲ್ಲಿ ಅವರನ್ನು ಸೇನಾಪಡೆ ತಡೆದು, ಚೀನಾ ಮತ್ತು ಭಾರತದ ಸೇನಾಪಡೆ ಅಲ್ಲಿ ನಿಲುಗಡೆಯಾಗಿದ್ದು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲಿನ ಸ್ಥಳೀಯರು ಕೂಡ ನನ್ನ ಸ್ನೇಹಿತನಿಗೆ ಈ ವಿಷಯ ದೃಢಪಡಿಸಿದ್ದಾರೆ ಎಂದು ಅರುಣಾಚಲ ಮೂಲದ ವಕೀಲ ಹಾಗೂ ಕಾರ್ಯಕರ್ತ ಹೇಳಿದ್ದಾರೆ.
ಕನಿಷ್ಠ ಮೂರು ಸ್ವತಂತ್ರ ಮೂಲಗಳು ಈ ವಿಷಯವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ದೃಢಪಡಿಸಿದ್ದು ಸುಮಾರು 24 ಮಂದಿಯನ್ನು ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಮುನ್ನ ಸೈನಿಕರು ನಿಲುಗಡೆಯಾಗಿದ್ದು ಈಗಲೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ನಾವು ಈ ವಿಷಯವನ್ನು ದೊಡ್ಡದು ಮಾಡಿ ಇನ್ನೊಂದು ಡೊಕ್ಲಾಮ್ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಸರ್ಕಾರ ಈ ವಿಷಯವನ್ನು ಬಹಿರಂಗಪಡಿಸದಿರಲು ಹೇಳಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಅವರು ಕಳೆದ ವರ್ಷ ಭೂತಾನ್ ಭಾಗದಲ್ಲಿ ಭಾರತೀಯ ಮತ್ತು ಚೀನಾ ಸೇನಾಪಡೆಗಳು ಡೊಕ್ಲಾಮ್ ನಲ್ಲಿ 72 ದಿನಗಳ ಕಾಲ ನಡೆಸಿದ ಸಂಘರ್ಷದ ಬಗ್ಗೆ ಉಲ್ಲೇಖಿಸಿದ್ದಾರೆ. ಅಗತ್ಯ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಚೀನಾ ಭರವಸೆ ನೀಡಿದ ನಂತರ ಭಾರತೀಯ ಸೇನಾಪಡೆ ಸಿಕ್ಕಿಂ ಭಾಗದಲ್ಲಿ ಹಿಂತೆಗೆದುಕೊಂಡಿತ್ತು.
ಕಳೆದ ವಾರ ಅಂದರೆ ಡಿಸೆಂಬರ್ 28ರ ಸುಮಾರಿಗೆ ಅರುಣಾಚಲ ಪ್ರದೇಶದ ಗಡಿ ಮೂಲಕ ಭಾರತದೊಳಗೆ ಪ್ರವೇಶಿಸಿದ ರಸ್ತೆ ನಿರ್ಮಾಣ ತಂಡವನ್ನು ಗ್ರಾಮಸ್ಥರು ಗುರುತಿಸಿದ್ದರು. ತಂಡದಲ್ಲಿ ನಾಗರಿಕರು ಮತ್ತು ಸಮವಸ್ತ್ರ ಧರಿಸಿದ್ದವರು ಕೂಡ ಇದ್ದರು. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಇಂಡೊ-ಟಿಬೆಟಿಯನ್ ಗಡಿ ಸಿಬ್ಬಂದಿಗೆ ವಿಷಯ ತಲುಪಿಸಿದಾಗ ಬಿಶಿಂಗ್ ಸಮೀಪ ಮೆಡೊಗ್ ಎಂಬಲ್ಲಿ ಭದ್ರತಾಪಡೆಯನ್ನು ನಿಯೋಜಿಸಿದರು. ಯರ್ಲಂಗ್ ಸುಂಗ್ಪೋ ನದಿ ಭಾರತೀಯರು ಸಿಯಾಂಗ್ ಎಂದು ಕರೆಯುವ ನದಿಯ ಉತ್ತರ ಭಾಗವನ್ನು ಚೀನಾಪಡೆ ಪ್ರವೇಶಿಸಿದೆ. 

ಇಂಡೊ-ಟಿಬೆಟಿಯನ್ ಭದ್ರತಾ ಪಡೆ ಚೀನೀಯರಿಗೆ ಅಲ್ಲಿಂದ ಹೊರಟು ಹೋಗುವಂತೆ ಸೂಚಿಸಿದೆ. ಮಾತಿನ ಘರ್ಷಣೆ ಕೂಡ ನಡೆದಿದೆ. ಆದರೆ ಚೀನೀಯರು ಹಿಂತಿರುಗಲು ನಿರಾಕರಿಸಿದರು. ಇದಕ್ಕೆ ಭಾರತೀಯ ಸೇನೆ ಗಸ್ತುಪಡೆಯನ್ನು ಆ ಪ್ರದೇಶಕ್ಕೆ ಕಳುಹಿಸಿದ್ದು, ಇದೀಗ ಅಲ್ಲಿ ಭದ್ರತಾಪಡೆ ಠಿಕಾಣಿ ಹೂಡಿದೆ.

ಈ ಬಗ್ಗೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಕಚೇರಿಯನ್ನು ವಿಚಾರಿಸಿದರೆ ಘಟನೆ ಬಗ್ಗೆ ಅಸಡ್ಡೆ ತೋರಿದರು. ಇನ್ನು ಸ್ಥಳೀಯ ಸಂಸದ ನಿನೊಂಗ್ ಎರಿಂಗ್ ಅವರಿಗೆ ಸೇನಾಪಡೆಯ ನಿಲುಗಡೆ ಬಗ್ಗೆ ಮಾಹಿತಿ ಇಲ್ಲ ಎಂದರು. ಗೆಲ್ಲಿಂಗ್ ಗ್ರಾಮ ದಾಟಿ ಜನರು ಹೋಗಲು ಸೇನಾಪಡೆ ಬಿಡುವುದಿಲ್ಲ. ಅಂತಾರಾಷ್ಟ್ರೀಯ ಗಿಡಿಭಾಗಕ್ಕೆ ಟ್ಯುಟಿಂಗ್ ಪಟ್ಟಣದ ನಂತರ ಗೆಲ್ಲಿಂಗ್ ಮುಂದಿನ ಆಡಳಿತಾತ್ಮಕ ವಲಯವಾಗಿದೆ ಎನ್ನುತ್ತಾರೆ ವಕೀಲ ಕಾರ್ಯಕರ್ತರು.

ಡೊಕ್ಲಾಮ್ ಜೊತೆ ಹೋಲಿಕೆ ಮಾಡುವುದು ಸುಲಭವಾದರೂ ಈ ವಿಚಾರದಲ್ಲಿ ಸರಿಯಲ್ಲ. ಡೊಕ್ಲಾಮ್ ವಿವಾದದಲ್ಲಿ ಭೂತಾನ್ ದೇಶ ಕೂಡ ಒಳಗೊಂಡಿತ್ತು. ಆದರೆ ಈ ವಿಷಯದಲ್ಲಿ ಮೆಕ್ ಮೊಹಲ್ ರೇಖೆಯಿಂದ 4 ಕಿಲೋ ಮೀಟರ್ ದೂರದಲ್ಲಿ ಭಾರತದ ಪ್ರಾಂತ್ಯದೊಳಗೆ ಭಾರತ ಮತ್ತು ಚೀನಾ ಸೇನಾಪಡೆ ನಿಲುಗಡೆಯಾಗಿದೆ ಎಂಬುದು ಕೆಲವರು ಅಭಿಪ್ರಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com