ಲಾಲೂಗಿಂತ ಮೊದಲೇ ಜೈಲಿಗೆ ಅವರ ಸಹಾಯಕರು ಹಾಜರ್, ವಿವಾದದ ಬಳಿಕ ತನಿಖೆ ಆರಂಭ

ಮೇವು ಹಗರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತಮಗಿಂತ ಮೊದಲೇ ತಮ್ಮ ಸಹಾಯಕರನ್ನು ಜೈಲಿಗೆ ಕರೆಸಿಕೊಳ್ಳುವ ಮೂಲಕ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಪಾಟ್ನಾ: ಮೇವು ಹಗರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತಮಗಿಂತ ಮೊದಲೇ ತಮ್ಮ ಸಹಾಯಕರನ್ನು ಜೈಲಿಗೆ ಕರೆಸಿಕೊಳ್ಳುವ ಮೂಲಕ ಹೊಸದೊಂದು ವಿವಾದವನ್ನು  ಮೈಮೇಲೆ ಎಳೆದುಕೊಂಡಿದ್ದಾರೆ.
ಮೇವು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಯಾದವ್ ಅವರು ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್‌ ಜೈಲು ಸೇರಿದ್ದಾರೆಯಾದರೂ, ಅವರಿಗಿಂತ ಮೊದಲೇ ಅವರ ಇಬ್ಬರು ಆಪ್ತರು ಅದೇ ಜೈಲು ಸೇರಿದ್ದಾರೆ.  ಮೂಲಗಳ ಪ್ರಕಾರ ಲಾಲು ಪ್ರಸಾದ್ ಅವರ ಲಕ್ಷ್ಮಣ್‌ ಎಂಬ ಬಾಣಸಿಗ ಮತ್ತು ಮದನ್‌ ಯಾದವ್‌ ಎಂಬ ಹೈನುಗಾರ ಜೈಲು ಸೇರಿದ್ದು, ಡಿಸೆಂಬರ್‌ 23ರಂದು ಲಾಲು ಪ್ರಸಾದ್‌ ಯಾದವ್‌ ಅವರಿಗೆ ಶಿಕ್ಷೆ ವಿಧಿಸಿ ಅವರನ್ನು ಜೈಲಿಗೆ  ಒಯ್ಯುತ್ತಿದ್ದಂತೆಯೇ ಅವರಿಬ್ಬರೂ ಲಾಲೂ ಅವರ ಸ್ವಾಗತಕ್ಕೆ ನಿಂತಿದ್ದರಂತೆ. 
ಲಾಲು ಪ್ರಸಾದ್ ಅವರ ಜೈಲು ಶಿಕ್ಷೆ ಕುರಿತು ಮೊದಲೇ ಲೆಕ್ಕಾಚಾರ ಹಾಕಿದ್ದ ಲಾಲು ಬೆಂಬಲಿಗರು ಅವರು ಜೈಲು ಸೇರುವ ಮುನ್ನವೇ ಅವರ ಸೇವೆಗಾಗಿ ಇಬ್ಬರನ್ನು ನೇಮಕ ಮಾಡಿ ಕ್ಷುಲ್ಲಕ ವಿಚಾರದಲ್ಲಿ ಎಫ್ ಐಆರ್ ಹಾಕಿಸಿ ಲಾಲು  ಬರಬೇಕಿದ್ದ ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್‌ ಜೈಲಿಗೆ ಕಳುಹಿಸಿದ್ದರಂತೆ. 
ಜೈಲು ಸೇರಲು ದೊಡ್ಡ ಹೈ ಡ್ರಾಮಾ
ಲಾಲು ಅವರ ಅವರ ಬಾಣಸಿಗ ಲಕ್ಷ್ಮಣ ಮೊಹತೊ ಮತ್ತು ಹೈನುಗಾರ ವೃತ್ತಿಯ ಮದನ್‌ ಯಾದವ್‌ ಒಂದು ಕ್ರಿಮಿನಲ್‌ ಕೇಸ್‌ ಸೃಷ್ಟಿ ಮಾಡಲು ದೊಡ್ಡ ಹೈಡ್ರಾಮಾವನ್ನೇ ಸೃಷ್ಟಿ ಮಾಡಿದ್ದರಂತೆ. ಸುಮಿತ್ ಯಾದವ್ ಎಂಬಾತ  ಸಮೀಪದ ರಾಂಚಿಯ ಡೊರಾಂಡೋ ಪೊಲೀಸ್‌ ಠಾಣೆಗೆ ತೆರಳಿ ಲಕ್ಷ್ಮಣ್‌ ಮತ್ತು ಮದನ್‌ ಯಾದವ್‌ ತನಗೆ ಹೊಡೆದು 10000 ರೂ. ದರೋಡೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ಆದರೆ ಅಲ್ಲಿನ ಪೊಲೀಸರು ದೂರು ಸ್ವೀಕರಿಸಲು  ನಿರಾಕರಿಸಿದರು.
ಬಳಿಕ ಲಾಲು ಬೆಂಬಲಿಗರ ಆದೇಶದ ಮೇರೆಗೆ ಲೋವರ್‌ ಬಜಾರ್‌ ಪೊಲೀಸ್‌ ಠಾಣೆಗೆ ತೆರಳಿದ ಸುಮಿತ್ ಅಲ್ಲಿ ದೂರು ದಾಖಲಿಸಿದ್ದು, ಮಾತ್ರವಲ್ಲದೇ ತಾನೇ ಖುದ್ಧಾಗಿ ನಿಂತು ಎಫ್ ಐಆರ್ ಹಾಕಿಸಿದನಂತೆ. ಇನ್ನು  ಅಚ್ಚರಿ ಎಂದರೆ ಅತ್ತ  ಲೋವರ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ಇತ್ತ ಲಕ್ಷ್ಮಣ್ ಮತ್ತು ಮದನ್‌ ವಕೀಲರ ಮೂಲಕ ಶರಣಾಗಿದ್ದಾರೆ.
ಇಬ್ಬರನ್ನೂ ಕೆಳನ್ಯಾಯಾಲಯಕ್ಕೆ ಹಾಜರುಪಡಿಸಿದಾಗ  ಕೋರ್ಟ್‌ ಅವರನ್ನು ಲಾಲು ಪ್ರಸಾದ್‌ ಯಾದವ್‌ ಅವರನ್ನು ದಾಖಲಿಸಲಾದ ಬಿರ್ಸಾ ಮುಂಡಾ ಜೈಲಿಗೆ ಕಳುಹಿಸಿದ್ದಾರೆ. ಆ ಮೂಲಕ ಲಾಲು ಬೆಂಬಲಿಗರ ಯೋಜನೆ ಫಲ ನೀಡಿದ್ದು, ಲಾಲು ಬರುವುದಕ್ಕೆ ಮೊದಲೇ ಅವರ ಇಬ್ಬರು  ಬಿರ್ಸಾ ಮುಂಡಾ ಜೈಲು ಸೇರಿದ್ದಾರೆ. ಈ ಹಿಂದೆಯೂ ಕೂಡ ಅಂದರೆ ಲಾಲು ಅವರು 2013ರಲ್ಲಿ 2 ತಿಂಗಳ ಜೈಲು ವಾಸದಲ್ಲಿದ್ದಾಗಲೂ ಲಕ್ಷ್ಮಣ್‌ ಮತ್ತು ಮದನ್‌ ಜೈಲು ಕ್ಷುಲ್ಲಕ ಪ್ರಕರಣದಲ್ಲಿ ಜೈಲು ಸೇರಿ ತಮ್ಮ ಮಾಲೀಕನ ಸೇವೆ  ಮಾಡಿದ್ದರಂತೆ.
ಇದೀಗ ಲಾಲು ಸಹಾಯಕರ ಜೈಲು ಸೇರ್ಪಡೆ ಪ್ರಕರಣ ಬಿಹಾರದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಪ್ರಸ್ತುತ ರಾಂಚಿ ಎಸ್ ಎಸ್ ಪಿ ಕುಲದೀಪ್ ದ್ವಿವೇದಿ ತನಿಖೆಗೆ ಆದೇಶಿಸಿದ್ದಾರೆ. ಲಾಲು ಅವರ ಸಹಾಯಕ ಜೈಲು ಸೇರ್ಪಡೆ  ಕುರಿತಂತೆ ಲೋವರ್ ಬಜಾರ್ ಠಾಣೆಯ ಅಧಿಕಾರಿಗಳ ತನಿಖೆ ಆದೇಶಿಸಿದ್ದಾರೆ. ವಿವಾದದ ಬೆನ್ನಲ್ಲೇ ಪ್ರಸ್ತುತ ಬಿರ್ಸಾ ಮುಂಡಾ ಜೈಲಿನಲ್ಲಿರುವ ಲಾಲು ಅವರನ್ನು ಹಜಾರಿಯಾ ಬಾಗ್‌ ನ ಓಪನ್‌ ಜೈಲಿಗೆ ಸ್ಥಳಾಂತರ ಮಾಡುವ  ಸಾಧ್ಯತೆ ಇದೆ. ಅಲ್ಲಿ ಲಾಲು ಪ್ರಸಾದ್ ಅವರಿಗೆ ಅಧಿಕೃತವಾಗಿ ಸಹಾಯಕರನ್ನು ಇಟ್ಟುಕೊಳ್ಳುವ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com