ರಾಮಾಯಣ ಹಬ್ಬ, ಖಾದಿ ಜಾಕೆಟ್, ರಾಮಾಯಣ ಸ್ಟ್ಯಾಂಪ್; ಗಣರಾಜ್ಯೋತ್ಸವಕ್ಕೆ ಭಾರತದ ಭಾರಿ ಸಿದ್ಧತೆ!

ಅಸಿಯಾನ್ ನಾಯಕರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಭರದ ಸಿದ್ಧತೆ ನಡೆಸಿದ್ದು, ವಿಶ್ವನಾಯಕರು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಪ್ರಾಚೀನ ಭಾರತದ ಮಹಾಕಾವ್ಯ 'ರಾಮಾಯಣ' ಅನಾವರಣಗೊಳಿಸಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಸಿಯಾನ್ ನಾಯಕರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಭರದ ಸಿದ್ಧತೆ ನಡೆಸಿದ್ದು, ವಿಶ್ವನಾಯಕರು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದಲ್ಲಿ  ಪ್ರಾಚೀನ ಭಾರತದ ಮಹಾಕಾವ್ಯ 'ರಾಮಾಯಣ' ಅನಾವರಣಗೊಳಿಸಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.
ಮೂಲಗಳ ಪ್ರಕಾರ ವಿಶ್ವನಾಯಕರು ಪಾಲ್ಗೊಳ್ಳುತ್ತಿರುವ ಗಣರಾಜ್ಯೋತ್ಸವ ವೇದಿಕೆಯಲ್ಲಿ ರಾಮಾಯಣ ಹಬ್ಬ ನಡೆಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಇದೇ ವೇದಿಕೆಯಲ್ಲಿ ಭಾರತದ ಸಾಂಪ್ರದಾಯಿಕ ಧಿರಿಸು ಖಾದಿಯ  ಜಾಕೆಟ್ ಗಳನ್ನು ಮತ್ತು ರಾಮಾಯಣ ಸ್ಟ್ಯಾಂಪ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗತ್ತಿದೆ. 
ಜನವರಿ 24ರಿಂದ 26ರವರೆಗೂ ಅಸಿಯಾನ್ ನಾಯಕರು ಭಾರತದಲ್ಲೇ ತಂಗಲಿದ್ದು, ಈ ವೇಳೆ ಅವರ ಮನರಂಜನೆಗಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶ್ವ ನಾಯಕರಿಗೆ ಪ್ರಾಚೀನ ಭಾರತದ  ಮಹಾಕಾವ್ಯ ರಾಮಾಯಣದ ಪರಿಚಯ ಮಾಡಿಸಲೆಂದೇ ಕೇಂದ್ರ ಸರ್ಕಾರ ರಾಮಾಯಣ ಹಬ್ಬ ಏರ್ಪಾಟು ಮಾಡಲು ನಿರ್ಧರಿಸಿದ್ದು, ಈ ಹಬ್ಬದಲ್ಲಿ ದೇಶದ ಪ್ರಮುಖ ಕಲಾವಿದರು ರಾಮಾಯಣದ ಪಾತ್ರಧಾರಿಗಳಾಗಿ ಅಭಿನಯಿಸಿ  ವಿಶ್ವ ನಾಯಕರಿಗೆ ರಾಮಾಯಣದ ದರ್ಶನ ಮಾಡಿಸಲಿದ್ದಾರೆ. ಇನ್ನು ದೆಹಲಿಯ ಕಮನಿ ಆಡಿಟೋರಿಯಂ ಅನ್ನು ಇದಕ್ಕಾಗಿ ವಿಶೇಷವಾಗಿ ಅಲಂಕರಿಸಲಾಗುತ್ತಿದ್ದು, ವಿಶೇಷ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಅಂತೆಯೇ ಇದೇ  ಸಂದರ್ಭದಲ್ಲಿ ವಿಶ್ವ ನಾಯಕರಿಂದ ರಾಮಾಯಣ ಕುರಿತ ಸ್ಯ್ಟಾಂಪ್ ಬಿಡುಗಡೆ ಮಾಡಿಸುವ ಕುರಿತೂ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದ್ದು, ಅಂತೆಯೇ ಭಾರತದ ಸಾಂಪ್ರದಾಯಿಕ ಧಿರಿಸುವ ಖಾದಿಯ ಜಾಕೆಟ್ ಗಳನ್ನು  ಕೂಡ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 
ಈಗಾಗಲೇ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ಆರಂಭಿಸಿರುವ ಕೇಂದ್ರ ವಿದೇಶಾಂಗ ಇಲಾಖೆ ಅಧಿಕಾರಿಗಳು ಅಸಿಯಾನ್ ನ 10 ರಾಷ್ಟ್ರಗಳ ರಾಯಭಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು ಈಗಾಗಲೇ  ಗಣರಾಜ್ಯೋತ್ಸವಕ್ಕೆ ಅತಿಥಿಗಳಾಗಿ ಆಗಮಿಸುವ ಕುರಿತು ಅಸಿಯಾನ್ ನ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಂ ಸೇರಿದಂತೆ ಎಲ್ಲ  10 ರಾಷ್ಟ್ರಗಳ ಮುಖಂಡರು ಒಪ್ಪಿಗೆ ಸೂಚಿಸಿದ್ದು, ಜನವರಿ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ.
ಜನವರಿ 25ರಂದು ಅಸಿಯಾನ್-ಭಾರತ ಸ್ಮರಣಾರ್ಥ ಶೃಂಗಸಭೆ ಆಯೋಜನೆಯಾಗಿದ್ದು, ದೆಹಲಿಯ ಚಾಣಕ್ಯಪುರಿಯಲ್ಲಿರುವ ತಾಜ್ ಪ್ಯಾಲೆಸ್ ಹೊಟೆಲ್ ನಲ್ಲಿ ಶೃಂಗಸಭೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದೇ ವೇದಿಕೆಯಲ್ಲೇ ವಿಶ್ವ  ನಾಯಕರು ರಾಮಾಯಣ ಕುರಿತ ಸ್ಯ್ಟಾಂಪ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮದ ಬಳಿಕ ವಿಶ್ವ ನಾಯಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಔತಣಕೂಟ  ಏರ್ಪಡಿಸಿದ್ದು, ಕಾರ್ಯಕ್ರಮಕ್ಕೆ ಅಸಿಯಾನ್ ನಾಯಕರೊಂದಿಗೆ ಪ್ರಧಾನಿ ಮೋದಿ, ಹಲವು ಕೇಂದ್ರ ಸಚಿವರು ಮತ್ತು ಪ್ರಮುಖ ಅಧಿಕಾರಿಗಳು ಪಾಲ್ಗೊಳ್ಳಲ್ಲಿದ್ದಾರೆ. ಅದೇ ದಿನ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು  ಭೋಜನಕೂಟ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ವಿಶ್ವನಾಯಕರೂ ಖಾದಿ ಜಾಕೆಟ್ ಧರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com