ಪದ್ಮಾವತ್ ಗೆ ನಿಷೇಧ: 'ಸುಪ್ರೀಂ' ಮೆಟ್ಟಿಲೇರಿದ ರಾಜಸ್ತಾನ, ಮಧ್ಯ ಪ್ರದೇಶ ಸರ್ಕಾರ!

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಇತ್ತ ಚಿತ್ರಕ್ಕೆ ಮರು ನಿಷೇಧ ಹೇರುವಂತೆ ಕೋರಿ ರಾಜಸ್ತಾನ, ಮಧ್ಯ ಪ್ರದೇಶ ಸರ್ಕಾರಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿವೆ.
ಪದ್ಮಾವತ್ ಪ್ರತಿಭಟನೆ
ಪದ್ಮಾವತ್ ಪ್ರತಿಭಟನೆ
ಜೈಪುರ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಇತ್ತ ಚಿತ್ರಕ್ಕೆ ಮರು ನಿಷೇಧ ಹೇರುವಂತೆ ಕೋರಿ ರಾಜಸ್ತಾನ, ಮಧ್ಯ ಪ್ರದೇಶ ಸರ್ಕಾರಗಳು  ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿವೆ.
ನಟಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರಕ್ಕೆ ವಿರೋಧ ಮುಂದುವರೆದಿರುವಂತೆಯೇ ಇತ್ತ ರಾಜಸ್ತಾನ ಮತ್ತು ಮಧ್ಯ ಪ್ರದೇಶ ಸರ್ಕಾರಗಳು ಚಿತ್ರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಮರು ಹೇರಿಕೆ ಮಾಡುವ  ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಎಂ ಖಾನ್ವಿಲ್ಕತರ್ ನೇತೃತ್ವದ ತ್ರಿಸದಸ್ಯ  ಪೀಠದಲ್ಲಿ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.
ಏತನ್ಮಧ್ಯೆ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಆಗ್ರಹಿಸಿ ರಾಜಸ್ತಾನ, ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಚಿತ್ರ ಬಿಡುಗಡೆ ವಿರೋಧಿಸಿ ಕರ್ಣಿ ಸೇನಾ ಕಾರ್ಯಕರ್ತರ  ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗತ್ತಿದೆ. ಗುಜರಾತ್ ನಲ್ಲಿ ಆಕ್ರೋಶಿತ ಕಾರ್ಯಕರ್ತರು ಸರ್ಕಾರಿ ಬಸ್ ಗೆ ಬೆಂಕಿ ಹಾಕಿದ್ದು, ರಾಜಸ್ತಾನದಲ್ಲಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಟೈರ್ ಗೆ ಬೆಂಕಿ ಹಾಕಿದ್ದಾರೆ. ಇನ್ನು  ರಾಜಸ್ತಾನದ ಬಿಲ್ವಾರಾ ಗ್ರಾಮದಲ್ಲಿ ಯುವಕನೋರ್ವ 350 ಅಡಿ ಎತ್ತರದ ಮೊಬೈಲ್ ಟವರ್ ಏರಿ ಕುಳಿತಿದ್ದು, ಪದ್ಮಾವತ್ ಚಿತ್ರಕ್ಕೆ ಅವಕಾಶ ನೀಡದಂತೆ ಆಗ್ರಹಿಸಿದ್ದಾನೆ. ಇಲ್ಲವಾದಲ್ಲಿ ತಾನು ಟವರ್ ಮೇಲೆಯೇ ಪೆಟ್ರೋಲ್  ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. 
ಇನ್ನು ಹರ್ಯಾಣದಲ್ಲೂ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದ್ದು, ಕುರುಕ್ಷೇತ್ರದಲ್ಲಿ ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಮಾಲ್ ಮೇಲೆ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಚಿತ್ರದ ಪೋಸ್ಟರ್ ಹರಿದು, ಕಿಟಕಿ ಗಾಜುಗಳನ್ನು ಪುಡಿ  ಮಾಡಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ. ಯಾವುದೇ ಚಿತ್ರ ಮಂದಿರ ಮಾಲೀಕರು ಚಿತ್ರ  ಪ್ರದರ್ಶನಕ್ಕೆ ಭದ್ರತೆ ಕೋರಿದರೆ ಖಂಡಿತಾ ಸರ್ಕಾರ ಭದ್ರತೆ ಒದಗಿಸುತ್ತದೆ ಎಂದು ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com