ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೋರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ಪಾಕಿಸ್ತಾನೆ ಸೇನೆ ಭಾರತೀಯ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಭಾರಿ ಗುಂಡಿನ ದಾಳಿ ನಡೆಸುತ್ತಿದ್ದು, 71 ಶಾಲೆಗಳನ್ನು ಬಂದ್ ಮಾಡಲಾಗಿದೆ.
ರಾಜೋರಿ ಜಿಲ್ಲೆಯ ನೌಷೇರಾ ಮತ್ತು ಲಾಮ್ ಸೆಕ್ಟರ್ ನಲ್ಲಿ ಪಾಕ್ ಸೇನೆ ಇಂದು ಬೆಳಗ್ಗೆಯಿಂದ ಭಾರಿ ಗುಂಡಿನ ದಾಳಿ ನಡೆಸುತ್ತಿದೆ ಎಂದು ರಾಜೋರಿ ಉಪ ಆಯುಕ್ತ ಶಾಹಿದ್ ಇಖ್ಮಾಲ್ ಚೌಧರಿ ಅವರು ಹೇಳಿದ್ದಾರೆ.
ಕಂಪ್ಲ, ಪುಖಾರಿ, ಲಾಮ್ ಅನ್ವಾಸ್ ಭಂಡಾರ್ ಮತ್ತು ರಟ್ಟಾಲ್ ಪ್ರದೇಶದಲ್ಲಿ ಪಾಕ್ ಸೇನೆ ಭಾರಿ ಗುಂಡಿನ ದಾಳಿಯ ನಡೆಸುತ್ತಿದ್ದು, ದಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 71 ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿನ್ನೆ ಸಹ ಪಾಕ್ ಪಡೆಗಳು ಮಂಕೋಟೆ, ಕೃಷ್ಣಘಾಟಿ ಮತ್ತು ನೌಷೇರಾ ಸೆಕ್ಟರ್ ನಲ್ಲಿ ಗುಂಡಿನ ದಾಳಿ ನಡೆಸಿದ್ದವು. ಪಾಕ್ ಗುಂಡಿನ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.