

ನವದೆಹಲಿ: ದೆಹಲಿಯ ಜಂತರ್ ಮಂತರ್, ಬೋಟ್ ಕ್ಲಬ್ ಮೊದಲಾದ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಸಂಪೂರ್ಣ ನಿಷೇಧ ಹಾಕಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಮಾರ್ಗದರ್ಶನಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ, ಜನರ ಪ್ರತಿಭಟಿಸುವ ಹಕ್ಕು ಮತ್ತು ಶಾಂತಿಯುತವಾಗಿ ಬದುಕುವ ಹಕ್ಕುಗಳ ನಡುವೆ ಸಮತೋಲನ ಕಾಪಾಡಬೇಕಾದ ಅವಶ್ಯಕತೆಯಿದೆ ಎಂದರು.
ಜಂತರ್ ಮಂತರ್ ಮತ್ತು ಇಂಡಿಯಾ ಗೇಟ್ ಬಳಿಯ ಬೋಟ್ ಕ್ಲಬ್ ಹತ್ತಿರ ಪ್ರತಿಭಟನೆಗಳಿಗೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನಗಳನ್ನು ರಚಿಸುವಂತೆ ನ್ಯಾಯಾಧೀಶರು ಆದೇಶ ನೀಡಿದರು.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ದೆಹಲಿಯ ಜಂತರ್ ಮಂತರ್, ಬೋಟ್ ಕ್ಲಬ್ ಗಳಲ್ಲಿ ಎಲ್ಲಾ ರೀತಿಯ ಪ್ರತಿಭಟನೆಯನ್ನು ನಿಷೇಧಿಸಿದ್ದನ್ನು ಪ್ರಶ್ನಿಸಿ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.