ಎನ್ಆರ್'ಸಿ ಕಾರ್ಯ ನಡೆಸುತ್ತಿರುವುದು 'ಸುಪ್ರೀಂ' ನಿಗಾದಲ್ಲಿ, ಸರ್ಕಾರದ ಯಾವ ಪಾತ್ರವಿಲ್ಲ: ಲೋಕಸಭೆಯಲ್ಲಿ ಗೃಹ ಸಚಿವ

ಎನ್ಆರ್​ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಕರಡು ಕುರಿತ ಕಾರ್ಯಗಳು ನಡೆಯುತ್ತಿರುವುದು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ, ಇದರಲ್ಲಿ ಸರ್ಕಾರದ ಯಾವ ಪಾತ್ರವೂ ಇಲ್ಲ ಎಂದು ಲೋಕಸಭೆಯಲ್ಲಿ...
ಲೋಕಸಭೆಯಲ್ಲಿ ರಾಜನಾಥ್ ಸಿಂಗ್
ಲೋಕಸಭೆಯಲ್ಲಿ ರಾಜನಾಥ್ ಸಿಂಗ್
Updated on
ನವದೆಹಲಿ: ಎನ್ಆರ್​ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಕರಡು ಕುರಿತ ಕಾರ್ಯಗಳು ನಡೆಯುತ್ತಿರುವುದು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ, ಇದರಲ್ಲಿ ಸರ್ಕಾರದ ಯಾವ ಪಾತ್ರವೂ ಇಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ. 
ಎನ್ಆರ್​ಸಿ ಕರಡು ಕುರಿತಂತೆ ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ಟಿಎಂಸಿ ಸೇರಿದಂತೆ ಇನ್ನಿತರೆ ಪಕ್ಷಗಳು ತೀವ್ರವಾಗಿ ಕಿಡಿಕಾರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜನಾಥ್ ಸಿಂಗ್ ಅವರು, ಕರಡು ಕುರಿತ ಕಾರ್ಯದಲ್ಲಿ ಕೇಂದ್ರ ಸರ್ಕಾರದ ಯಾವ ಪಾತ್ರವೂ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. 
ಎನ್ಆರ್'ಸಿ ಕರಡು ಕುರಿತಂತೆ ಸರ್ಕಾರದ ವಿರುದ್ಧ ಕಿಡಿಕಾರುತ್ತಿರುವ ವಿಪಕ್ಷಗಳನ್ನು ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ, ಎನ್'ಆರ್'ಸಿ ಕರಡಿನಲ್ಲಿ ಕೇಂದ್ರದ ಪಾತ್ರವೇನಿದೆ? ಎನ್'ಆರ್'ಸಿ ಕುರಿತ ಕಾರ್ಯಗಳು ನಡೆಸುತ್ತಿರುವುದು ಸುಪ್ರೀಂಕೋರ್ಟ್ ನಿಗಾದಲ್ಲಿ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಈ ವಿಚಾರದಲ್ಲಿ ಯಾವುದೇ ಪಕ್ಷಗಳೂ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ. 
ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಇದೇನು ಅಂತಿಮ ಪಟ್ಟಿಯಲ್ಲ. ಕರಡು ಕುರಿತಂತೆ ಪ್ರತಿಕ್ರಿಯೆ ಹಾಗೂ ವಿರೋಧ ವ್ಯಕ್ತಪಡಿಸಲೂ ಅವಕಾಶವಿದೆ. ಹೀಗಾಗಿ ಯಾರೂ ಭೀತಿಗೊಳಗಾಗಬಾರದು ಎಂದಿದ್ದಾರೆ. 
ರಾಷ್ಟ್ರೀಯ ನಾಗರಿಕ ನೋಂದಣಿಯು ಇಡೀ ದೇಶಕ್ಕೆ ಸಂಬಂಧಿಸಿದ್ದು, ಇಡೀ ದೇಶದ ನಾಗರೀಕರ ಹೆಸರು ಇದರಲ್ಲಿರುತ್ತದೆ. ಆದರೆ, ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾದೇಶೀಯರ ಹಾವಳಿ ಅಧಿಕವಾಗಿರುವ ಕಾರಣ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಹಿಂಸಾಚಾರ ನಡೆಯುತ್ತಿರುವ ಕಾರಣ ಸುಪ್ರೀಂಕೋರ್ಟ್ ನಿಗಾದಲ್ಲಿ ಅಸ್ಸಾಂ ಸರ್ಕಾರ ರಾಜ್ಯದ ನಾಗರೀಕರ ಪ್ರತ್ಯೇಕ ನೋಂದಣಿ ಕೈಗೊಳ್ಳುತ್ತಿದೆ. 

ಅಸ್ಸಾಂ ರಾಜ್ಯದಲ್ಲಿ ಮೊದಲ ಕರಡು ಜ.1 ರಂದು ಬಿಡುಗಡೆಯಾಗಿತ್ತು. ಆಗ 3.29 ಕೋಟಿ ಅರ್ಜಿದಾರರಲ್ಲಿ 1.9 ಕೋಟಿ ಜನರ ಹೆಸರನ್ನು ಸೇರ್ಪಡೆಗೊಳಿಸಲಾಗಿತ್ತು. ಉಳಿದ 2 ಕೋಟಿ ಜನರ ಹಣೆಬರಹ ಇದೀಗ ತೀರ್ಮಾನವಾಗಲಿದೆ. ಹೀಗಾಗಿ ಅಕ್ರಮ ಬಾಂಗ್ಲಾದೇಶೀ ವಲಸಿಗರಿಗೆ ಇದು ಬಿಸಿಮುಟ್ಟಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. 

ಅಸ್ಸಾಂ ನಾಗರಿಕರ ನೋಂದಣಿಯಲ್ಲಿ ಹೆಸರು ಇರದೇ ಹೋದವರನ್ನು ಅವರವರ ದೇಶಕ್ಕೆ ಗಡೀಪಾರು ಮಾಡುವ ಸಾಧ್ಯತೆಗಳಿವೆ. ಅಸ್ಸಾಂನಲ್ಲಿ ನೇಪಾಳಿಗರು ಹಾಗೂ ಬಾಂಗ್ಲಾ ವಲಸಿಗರು ಇದ್ದು, ಇವರ ಮೂಲಗಳನ್ನು ಆಧರಿಸಿ ಆಯಾ ದೇಶಗಳಿಗೆ ಗಡೀಪಾರು ಮಾಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತದೆ. ಆದರೆ, ಇದಕ್ಕೂ ಮುನ್ನ ಆ ದೇಶಗಳ ಜೊತೆಗೆ ಗಡೀಪಾರು ಒಪ್ಪಂದ ಮಾಡಿಕೊಂಡಿರಬೇಕಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com