ತಮಿಳುನಾಡು ಜನರಿಗೆ ಪ್ರಧಾನಿ ಮೋಸ, ಸರ್ವಪಕ್ಷ ನಿಯೋಗ ಭೇಟಿಗೆ ಮೋದಿ ನಕಾರ: ಎಂಕೆ ಸ್ಟಾಲಿನ್

ತಮಿಳುನಾಡಿನ ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಮೋದಿ ನಿರಾಕರಿಸುವ ಮೂಲಕ ತಮಿಳುನಾಡು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಡಿಎಂಕೆ ಕಾರ್ಯಕಾರಿ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಸಿಎಂ ಪಳನಿ ಸ್ವಾಮಿ ಭೇಟಿ ಮಾಡಿದ ಎಂಕೆ ಸ್ಟಾಲಿನ್
ಸಿಎಂ ಪಳನಿ ಸ್ವಾಮಿ ಭೇಟಿ ಮಾಡಿದ ಎಂಕೆ ಸ್ಟಾಲಿನ್
ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ತಮಿಳುನಾಡಿನ ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಮೋದಿ ನಿರಾಕರಿಸುವ ಮೂಲಕ ತಮಿಳುನಾಡು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಡಿಎಂಕೆ ಕಾರ್ಯಕಾರಿ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ಕಾವೇರಿ ಅಂತಿಮ ಆದೇಶ ಮತ್ತು ಕಾವೇರ ನಿರ್ವಹಣಾ ಮಂಡಳಿ ರಚನೆ ಸಂಬಂಧ ಚರ್ಚೆ ನಡೆಸಲು ಚೆನ್ನೈನಲ್ಲಿ  ತಮಿಳುನಾಡು ಸಿಎಂ ಇ ಪಳನಿಸ್ವಾಮಿ ಕಚೇರಿಗೆ ಆಗಮಿಸಿದ್ದ ಎಂಕೆ ಸ್ಟಾಲಿನ್ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು. ಈ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಸಿಎಂ ಪಳನಿಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಈ ವೇಳೆ ಉಭಯ ನಾಯಕರು ವಿಶೇಷ ಅಧಿವೇಶನ ಕರೆದು ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ನಿರ್ಣಯ ಅಂಗೀಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಿಎಂ ಪಳನಿ ಸ್ವಾಮಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಕೆ ಸ್ಚಾಲಿನ್, ತಮಿಳುನಾಡಿನ ಸರ್ವಪಕ್ಷ ನಿಯೋಗ ಭೇಟಿಗೆ ನಿರಾಕರಿಸುವ ಮೂಲಕ ಮತ್ತೆ ಪ್ರಧಾನಿ ಮೋದಿ ತಮಿಳುನಾಡು ಜನತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿನ ವಿಶ್ವಾಸಕ್ಕೆ ಪ್ರಧಾನಿ ಮೋದಿ ದ್ರೋಹ ಬಗೆದಿದ್ದು, ಸಂಬಂಧ ಸಿಎಂ ಪಳನಿ ಸ್ವಾಮಿ ಅವರೊಂದಿಗೆ ನಾವು ಚರ್ಚಿಸಿದ್ದೇವೆ. ಅಲ್ಲದೇ ವಿಶೇಷ ಅಧಿವೇಶನ ಕರೆದು ನಿರ್ಣಯ ಅಂಗೀಕರಿಸುವಂತೆ ಸಲಹೆ ನೀಡಿದ್ದೇವೆ. ಪಳನಿ ಸ್ವಾಮಿ ಅವರೂ ಕೂಡ ವಿಶೇಷ ಅಧಿವೇಶನ ಕರೆಯುವುದಾಗಿ ಹೇಳಿದ್ದಾರೆ. 
ಅಲ್ಲದೆ ಕಾವೇರಿ ನದಿ ವಿಚಾರವಾಗಿ ತಮಿಳುನಾಡಿಗೆ ಅನ್ಯಾಯವಾದರೆ ತಮಿಳುನಾಡಿನ ಎಲ್ಲ ಪಕ್ಷಗಳ ಸಂಸದರೂ ಸಾಮೂಹಿಕ ರಾಜಿನಾಮೆ ನೀಡುವ ಕುರಿತು ಚರ್ಚೆ ಮಾಡಿದ್ದೇವೆ, ಈ ಸಂಬಂಧ ಸಂಸತ್  ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದೇವೆ. ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಸುವುದಾಗಿ ಸಿಎಂ ಪಳನಿ ಸ್ವಾಮಿ ಹೇಳಿದ್ದಾರೆ ಎಂದು ಸ್ಟಾಲಿನ್ ಮಾಹಿತಿ ನೀಡಿದರು.
ಸ್ಟಾಲಿನ್ ಆರೋಪ ಶುದ್ಧ ಸುಳ್ಳು: ಎಐಎಡಿಎಂಕೆ
ಇದೇ ವಿಚಾರವಾಗಿ ಮಾತನಾಡಿದ ತಮಿಳುನಾಡು ಮೀನಗಾರಿಕಾ ಸಚಿವ ಡಿ ಜಯಕುಮಾರ್ ಅವರು, ಪ್ರಧಾನಿ ಮೋದಿ ಸರ್ವಪಕ್ಷ ನಿಯೋಗ ಭೇಟಿಗೆ ಅವಕಾಶ ನೀಡಿಲ್ಲ ಎಂಬ ಸ್ಟಾಲಿನ್ ಆವರ ಆರೋಪ ಸುಳ್ಳು.. ಆದರೆ ಸಿಎಂ ಪಳನಿ ಸ್ವಾಮಿ ಅವರು ವಿಶೇಷ ಅಧಿವೇಶನ ಕರೆಯಲು ಸಮ್ಮತಿ ಸೂಚಿಸಿದ್ದಾರೆ ಎಂದು  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com