ಶಸ್ತ್ರಾಸ್ತ್ರ ಆಮದು: ಸೌದಿ ಹಿಂದಿಕ್ಕಿದ ಭಾರತಕ್ಕೆ ಅಗ್ರಸ್ಥಾನ

ಶಸ್ತ್ರಾಸ್ತ್ರ ಆಮದು ವಿಚಾರದಲ್ಲಿ ಇದೀಗ ಭಾರತ ಅಗ್ರ ಸ್ಥಾನಕ್ಕೇರಿದ್ದು, 2013ರಿಂದ 2017ರ ಅವಧಿಯಲ್ಲಿ ವಿಶ್ವದ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಶಸ್ತ್ರಾಸ್ತ್ರ ಆಮದು ವಿಚಾರದಲ್ಲಿ ಇದೀಗ ಭಾರತ ಅಗ್ರ ಸ್ಥಾನಕ್ಕೇರಿದ್ದು,  2013ರಿಂದ 2017ರ ಅವಧಿಯಲ್ಲಿ ವಿಶ್ವದ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದ ಕುರಿತ ಅಂಕಿಅಂಶ ಹಾಗೂ ಮಾಹಿತಿ ಸಂಗ್ರಹಿಸುವ ಸಂಸ್ಥೆ ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ) ಸಿದ್ಧಪಡಿಸಿರುವ ವರದಿಯನ್ವಯ ವಿಶ್ವದ ಒಟ್ಟಾರೆ ಆಮದಾಗುವ ಶಸ್ತ್ರಾಸ್ತ್ರಗಳಲ್ಲಿ ಶೇ.12ರಷ್ಟನ್ನು ಭಾರತವೇ ಪಡೆಯುತ್ತಿದೆ ಎಂದುತಿಳಿದುಬಂದಿದೆ. ಇನ್ನು ಪಟ್ಟಿಯಲ್ಲಿ ಸೌದಿ ಅರೆಬಿಯ, ಈಜಿಪ್ಟ್, ಯುಎಇ, ಚೀನಾ, ಆಸ್ಟ್ರೇಲಿಯಾ, ಅಲ್ಜೀರಿಯಾ, ಇರಾಕ್ ಹಾಗೂ ಪಾಕಿಸ್ತಾನ ಆ ಬಳಿಕದ ಸ್ಥಾನದಲ್ಲಿದೆ. 
ವರದಿಯಲ್ಲಿ ಭಾರತದ ಈಗಿನ ಸ್ಥಿತಿಗೆ ಪಾಕ್  ಹಾಗೂ ಚೀನಾ ಗಡಿ ಭಾಗದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆ ಸ್ಥಿತಿಯೇ ಕಾರಣ ಎನ್ನಲಾಗುತ್ತಿದ್ದು, ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಸ್ವಯಂ ಉತ್ಪಾದಿಸಲು ಅಶಕ್ತವಾಗಿರುವುದರಿಂದ  ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂತೆಯೇ ಇದೇ ಅವಧಿಯಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಖರೀದಿಯಲ್ಲಿ ಶೇ.36ರಷ್ಟು ಇಳಿಕೆಯಾಗಿದೆ ಎಂದು ‘ಸಿಪ್ರಿ’ ಯ ಶಸ್ತ್ರಾಸ್ತ್ರ ಮತ್ತು ರಕ್ಷಣಾ ವೆಚ್ಚ ವಿಭಾಗದ ಹಿರಿಯ ಸಂಶೋಧಕ ಸೀಮನ್ ವೆಝಮನ್ ತಿಳಿಸಿದ್ದಾರೆ. 
ಅಲ್ಲದೆ ಚೀನಾವು ಏಷ್ಯಾದಲ್ಲಿ ಪ್ರಮುಖ ಶಸ್ತ್ರಾಸ್ತ್ರ ರಫ್ತು ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಬಗ್ಗೆ ವೆಝಮನ್ ತಮ್ಮ ವರದಿಯಲ್ಲಿ ಪ್ರಸ್ತಾವಿಸಿದ್ದು, ಈ ಪಟ್ಟಿಯಲ್ಲಿ ಅಂದರೆ ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿಲ್ಲ. ರಷ್ಯಾವು ಈಗಲೂ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ಪ್ರಮುಖ ರಾಷ್ಟ್ರವಾಗಿದ್ದು, ಇತ್ತೀಚಿನ ದಿನದಲ್ಲಿ ಭಾರತವು ಅಮೆರಿಕ ಜೊತೆಗಿನ ಬಾಂಧವ್ಯವನ್ನು ವೃದ್ಧಿಸಿಕೊಂಡಿರುವ ಕಾರಣ 2008ರಿಂದ 2012 ಹಾಗೂ 2013ರಿಂದ 2017ರ ಅವಧಿಯಲ್ಲಿ ಭಾರತಕ್ಕೆ ಅಮೆರಿಕದಿಂದ ಆಮದಾಗುತ್ತಿರುವ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಶೇ.557ರಷ್ಟು ಹೆಚ್ಚಳವಾಗಿದೆ ಎಂದು ‘ಸಿಪ್ರಿ’ ವರದಿ ತಿಳಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮಯನ್ಮಾರ್ ದೇಶಗಳ ಸೇನೆಯಲ್ಲಿ ಬಳಕೆಯಾಗುವ ಶಸ್ತ್ರಾಸ್ತ್ರಗಳಲ್ಲಿ ಶೇ.70ರಷ್ಟನ್ನು ಚೀನಾ ಪೂರೈಸುತ್ತಿರುವುದು ಗಮನಾರ್ಹವಾಗಿದ್ದು, ಅಲ್ಲದೆ ಚೀನಾವು ತನ್ನ ಶಸ್ತ್ರಾಸ್ತ್ರ ಮಾರಾಟ ಜಾಲವನ್ನು ಅಲ್ಜೀರಿಯ, ಥಾಯ್ಲೆಂಡ್ ಹಾಗೂ ಟರ್ಕ್‌ಮೆನಿಸ್ತಾನ ದೇಶಗಳಿಗೂ ವಿಸ್ತರಿಸಿದೆ . ಜೊತೆಗೆ , ಚೀನಾವು ಸೇನಾ ಬಳಕೆಗೆ ಶಸ್ತ್ರಾಸ್ತ್ರಗಳನ್ನು ಸ್ವತಃ ಉತ್ಪಾದಿಸುತ್ತಿದೆ ಹಾಗೂ ಪಾಕಿಸ್ತಾನ, ಬಾಂಗ್ಲಾ ಮತ್ತು ಮಯನ್ಮಾರ್ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಈ ದೇಶಗಳೊಂದಿಗಿನ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಸೀಮನ್ ವೆಝಮನ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಆಂತರಿಕ ಸಂಘರ್ಷದ ಸ್ಥಿತಿ ಮುಂದುವರಿದಿರುವ ಜೊತೆಗೆ ಭಾರತದೊಂದಿಗಿನ ಸಂಬಂಧ ಸುಧಾರಣೆಯಾಗದೆ ಆತಂಕದ ಪರಿಸ್ಥಿತಿ ಮುಂದುವರಿದಿದ್ದರೂ ಆ ದೇಶದ ಶಸ್ತ್ರಾಸ್ತ್ರ ಆಮದು ಪ್ರಮಾಣ 2008ರಿಂದ 2012, 2013ರಿಂದ 2017ರ ಅವಧಿಯಲ್ಲಿ ಶೇ.36ರಷ್ಟು ಕಡಿಮೆಯಾಗಿರುವುದು ಗಮನಾರ್ಹವಾಗಿದೆ. ಅಲ್ಲದೆ 2013ರಿಂದ 2017ರ ಅವಧಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕದಿಂದ ಆಮದಾಗುವ ಶಸ್ತ್ರಾಸ್ತ್ರ ಪ್ರಮಾಣದಲ್ಲಿ ಶೇ.76ರಷ್ಟು ಕಡಿತವಾಗಿದೆ. ಇದೇ ಅವಧಿಯಲ್ಲಿ ಭಾರತಕ್ಕೆ ಆಮದಾಗುವ ಶಸ್ತ್ರಾಸ್ತ್ರ ಪ್ರಮಾಣದಲ್ಲಿ ಶೇ.24ರಷ್ಟು ಹೆಚ್ಚಳವಾಗಿದೆ.  ಭಾರತಕ್ಕೆ ಆಮದಾಗುವ ಶಸ್ತ್ರಾಸ್ತ್ರಗಳಲ್ಲಿ ಶೇ.62ರಷ್ಟನ್ನು ರಷ್ಯಾ ಪೂರೈಸುತ್ತಿದ್ದರೆ, ಅಮೆರಿಕ ದ್ವಿತೀಯ ಸ್ಥಾನದಲ್ಲಿದ್ದು ಶೇ.15ರಷ್ಟು , ಮೂರನೇ ಸ್ಥಾನದಲ್ಲಿರುವ ಇಸ್ರೇಲ್ ಶೇ.11ರಷ್ಟು ಶಸ್ತ್ರಾಸ್ತ್ರ ಪೂರೈಸುತ್ತಿದೆ. ಚೀನಾವು ವಿಶ್ವದ ಐದನೇ ಪ್ರಮುಖ ಶಸ್ತ್ರಾಸ್ತ್ರ ರಫ್ತು ಮಾಡುವ ರಾಷ್ಟ್ರವಾಗಿದೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com