ಕೇಂದ್ರ, ರಾಜ್ಯ ಸರ್ಕಾರ ಬೆಂಬಲದ ನಡುವೆಯೂ, ಸಿಎಂ ಯೋಗಿ ಸ್ವಕ್ಷೇತ್ರದಲ್ಲೇ ಬಿಜೆಪಿ ಸೋಲು ಅನುಭವಿಸಿದ್ದೇಕೆ?

ಉಪ ಚುನಾವಣೆಯೇ ಆದರೂ ಇದೀಗ ಇಡೀ ದೇಶ ಉತ್ತರ ಪ್ರದೇಶ ಹಾಗೂ ಬಿಹಾರದ ಉಪ ಚುನಾವಣೆ ಫಲಿತಾಂಶದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಉಪ ಚುನಾವಣೆಯೇ ಆದರೂ ಇದೀಗ ಇಡೀ ದೇಶ ಉತ್ತರ ಪ್ರದೇಶ ಹಾಗೂ ಬಿಹಾರದ ಉಪ ಚುನಾವಣೆ ಫಲಿತಾಂಶದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.
ಪ್ರಮುಖವಾಗಿ ಉತ್ತರ ಪ್ರದೇಶ ಉಪ ಚುನಾವಣೆ ಆಡಳಿತಾ ರೂಢ ಬಿಜೆಪಿ ಪಕ್ಷಕ್ಕೆ ನಿಜಕ್ಕೂ ಮರ್ಮಾಘಾತವನ್ನೇ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಂಬಲ ಮತ್ತು ಖುದ್ಧು ಸಿಎಂ ಯೋಗಿ ಆದಿತ್ಯಾನಾಥ್ ಅವರ ಸ್ವಕ್ಷೇತ್ರವಾಗಿದ್ದರೂ ಕೂಡ ಗೋರಖ್ ಪುರದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಉತ್ತರ ಪ್ರದೇಶದಲ್ಲಿ ಗೋರಖ್ ಪುರ ಮತ್ತು ಫುಲ್ಪುರ ಬಿಜೆಪಿಯ ಭದ್ರಕೋಟೆಯಾಗಿತ್ತು. ಗೋರಖ್ ಪುರ ಸಿಎಂ ಯೋಗಿ ಆದಿತ್ಯಾನಾಥ್ ಅವರ ತವರು ನೆಲವಾಗಿದ್ದು, ಫುಲ್ಪುರ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಸ್ವಕ್ಷೇತ್ರವಾಗಿದೆ.
ಗೋರಖ್ ಪುರ ಸತತ 3 ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದು, ಸತತ 5 ಬಾರಿ ಯೋಗಿ ಆದಿತ್ಯಾನಾಥ್ ಅವರೇ ಅಧಿಪತಿಯಾಗಿದ್ದರು. ಸತತ 7 ಬಾರಿ ಗೋರಖ್ ಪುರದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಸಿಎಂ ಆದಿತ್ಯಾನಾಥ್ ಸತತ ಐದು ಬಾರಿ ಗೋರಖ್ ಪುರದಿಂದ ಆರಿಸಿ ಬಂದಿದ್ದರು. 1991ರಲ್ಲಿ ಮೊದಲ ಬಾರಿಗೆ ಗೋರಖ್ ಪುರದಿಂದ ಆರಿಸಿ ಬಂದಿದ್ದ ಯೋಗಿ ಆದಿತ್ಯಾನಾಥ್ ಈ ವರೆಗೂ ಅಲ್ಲಿ ಸೋಲು ಕಂಡಿರಲಿಲ್ಲ. ತಾವು ಸಿಎಂ ಆದ ಬಳಿಕ ಯೋಗಿ ಆದಿತ್ಯಾನಾಥ್ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಂತೆಯೇ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರೂ ಕೂಡ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಫುಲ್ಪುರ ಲೋಕಸಭಾ ಕ್ಷೇತ್ರ ತೆರವಾಗಿತ್ತು.
ಆದರೆ ಇದೀಗ ಈ ಎರಡೂ ಕ್ಷೇತ್ರಗಳು ಸಮಾಜವಾದಿ ಪಕ್ಷದ ಪಾಲಾಗಿದೆ. ಹಾಗಾದರೆ ಗೋರಖ್ ಪುರ ಮತ್ತು ಫುಲ್ಪುರದಲ್ಲಿ ಬಿಜೆಪಿಗೆ ಮುಳುವಾದ ಅಂಶಗಳೇನು..? ದಾಖಲೆ ಜಯ ಕಂಡಿದ್ದರೂ ತವರು ಕ್ಷೇತ್ರವಾಗಿದ್ದರೂ ಯೋಗಿ ಆದಿತ್ಯಾನಾಥ್ ಮುಖಭಂಗ ಅನುಭವಿಸಲು ಕಾರಣವಾದ ಅಂಶಗಳಾದರೂ ಏನೂ ಎಂಬ ಸಣ್ಣ ವಿಶ್ಲೇಷಣೆ ಇಲ್ಲಿದೆ..
1. ಅತಿಯಾದ ಆತ್ಮವಿಶ್ವಾಸ
ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವೆಂದರೆ ಅದು ಆ ಪಕ್ಷದ ಅತಿಯಾದ ಆತ್ಮ ವಿಶ್ವಾಸ.. ಹೌದು ಗೋರಖ್ ಪುರ ಸಿಎಂ ಯೋಗಿ ಆದಿತ್ಯಾನಾಥ್ ಅವರ ಸ್ವಕ್ಷೇತ್ರವಾಗಿದ್ದು, ಫುಲ್ಪುರ ಉಪ ಮುಖ್ಯಮಂತ್ರಿ ಹಾಗೂ ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಅವರ ಸ್ವಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದವು. ಇದೇ ಕಾರಣಕ್ಕೆ ಬಿಜೆಪಿ ಪಕ್ಷ ವಿಪಕ್ಷಗಳನ್ನು ಕಡೆಗಣಿಸಿತ್ತು. ಇದನ್ನೇ ತಮ್ಮ ಬಂಡವಾಳವಾಗಿಸಿಕೊಂಡ ಎಸ್ ಪಿ, ಬಿಎಸ್ ಪಿ ಜೊತೆಗೂಡಿ ಬಿಜೆಪಿಯನ್ನು ಮಣಿಸಿತು.
2. ಸರ್ಕಾರದ ವಿರುದ್ಧ ಜನ ತಿರುಗಿ ಬೀಳುವಂತೆ ಮಾಡಿದ್ದ ಗೋರಖ್ ಪುರ ಸರಣಿ ಶಿಶುಗಳ ಸಾವು
ಇನ್ನು ಸಿಎಂ ಯೋಗಿ ಆದಿತ್ಯಾನಾಥ್ ಅವರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಇಲ್ಲಿನ ಬಿಆರ್ ಡಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನೂರಾರು ಮಕ್ಕಳು ಸಾವನ್ನಪ್ಪಿದ್ದವು. ಈ ಪ್ರಕರಣವನ್ನು ಯೋಗಿ ಸರ್ಕಾರ ನಿಭಾಯಿಸಿದ ರೀತಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೇ ದಾಳವಾಗಿಸಿಕೊಂಡ ಎಸ್ ಪಿ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಾವು ಅಧಿಕಾರಕ್ಕೆ ಬಂದರೆ ಬಿಆರ್ ಡಿ ಆಸ್ಪತ್ರೆಯ ಸರಣಿ ಸಾವು ಪ್ರಕರಣವನ್ನು ಪುನಃ ತನಿಖೆ ನಡೆಸುವುದಾಗಿ ಘೋಷಣೆ ಮಾಡಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲೂ ಇದನ್ನೇ ದಾಳವಾಗಿಸಿಕೊಂಡ ಅಖಿಲೇಶ್ ಯೋಗಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದರು.
3. ಮೊದಲ ಬಾರಿಗೆ ಗೋರಖ್ ಪುರ ಅಶ್ರಮದ ಹೊರಗಿನ ವ್ಯಕ್ತಿಯ ಸ್ಪರ್ಧೆ
ಇನ್ನು ಇದೇ ಮೊದಲ ಬಾರಿಗೆ ಎಂಬಂತೆ ಗೋರಖ್ ಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಗೋರಖ್ ಪುರ ಆಶ್ರಮದ ಹೊರಗಿನ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಈ ಹಿಂದೆಲ್ಲಾ ಗೋರಖ್ ಪುರದಲ್ಲಿ ಆಶ್ರಮಕ್ಕೆ ಸೇರಿದ ವ್ಯಕ್ತಿಗಳನ್ನೇ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತಿತ್ತು. ಕಳೆದ ಮೂರು ದಶಕಗಳಿಂದಲೂ ಇದೇ ಸಂಪ್ರದಾಯ ಮುಂದುವರೆದಿತ್ತು. ಗೋರಖ್ ಪುರ ಪ್ರಧಾನ ಸ್ವಾಮಿಜಿಗಳು ಸೂಚಿಸಿದವರನ್ನು ಬಿಜೆಪಿ ಅಭ್ಯರ್ಥಿಯಾಗಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಆಶ್ರಮದ ಹೊರಗಿನ ವ್ಯಕ್ತಿ ಉಪೇಂದ್ರ ಶುಕ್ಲಾ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
4. ಎಸ್ ಪಿ-ಬಿಎಸ್ ಪಿ ಮೈತ್ರಿ
ಇನ್ನು ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿದ್ದು, ಎಸ್ ಪಿ-ಬಿಎಸ್ ಪಿ ಮೈತ್ರಿ. ಹೌದು..ಕಳೆದ 23 ವರ್ಷಗಳಿಂದ ಬದ್ಧ ವೈರಿಗಳಾಗಿದ್ದ ಬಿಎಸ್ ಪಿ ಮತ್ತು ಎಸ್ ಪಿ, ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಪರಸ್ಪರ ಸ್ನೇಹದ ಹಸ್ತ ಚಾಚಿದ್ದವು. ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮತದಾನಕ್ಕೆ ಕೇವಲ 10 ದಿನ ಬಾಕಿ ಇರುವಂತೆ ತಾವು ತಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನೂ ಕಣಕ್ಕಿಳಿಸುವುದಿಲ್ಲ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಅಭ್ಯರ್ಥಿಗಳಿಗೆ ಮತ ನೀಡಬೇಕಿದೆ ಎಂದು ಹೇಳಿದ್ದರು. ಮಾಯಾವತಿ ಅವರು ಎಲ್ಲಿಯೂ ಎಸ್ ಪಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಿಲಸಿ ಎಂದು ಹೇಳಿಲ್ಲವಾದರೂ ನೇರವಾಗಿ ಬಿಎಸ್ ಪಿ ಕಾರ್ಯಕರ್ತರ ಮತಗಳು ಎಸ್ ಪಿಗೆ ಬೀಳುವಂತೆ ಮಾಯಾವತಿ ಹೇಳಿಕೆ ನೀಡಿದ್ದರು. ಇದು ಎಸ್ ಪಿಗೆ ಆನೆ ಬಲ ತಂದು ಕೊಟ್ಟು, ಗೋರಖ್ ಪುರ ಹಾಗೂ ಫುಲ್ಪುರ ಕ್ಷೇತ್ರಗಳಲ್ಲಿ ಎಸ್ ಪಿ ಪ್ರಚಂಡ ಜಯ ಸಾಧಿಸುವಂತೆ ಮಾಡಿತು. ಬಿಎಸ್ ಪಿ ಮತಗಳು ಬಿಜೆಪಿಗೆ ವಿರುದ್ಧ ಅಂದರೆ ಎಸ್ ಪಿ ಪಾಲಾಗಿದ್ದವು.
5. ಫುಲ್ಪುರಕ್ಕೆ ಬೇರೆ ಕ್ಷೇತ್ರದ ಅಭ್ಯರ್ಥಿ
ಇನ್ನು ಈ ಬಾರಿ ಬಿಜೆಪಿ ಫುಲ್ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಬೇರೊಂದು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಫುಲ್ಪುರದಲ್ಲಿ ಪಟೇಲ್ ಸಮುದಾಯದ ಜನಸಂಖ್ಯೆ ಹೆಚ್ಚಾಗಿರುವುದರಿಂದ ಬಿಜೆಪಿ ಕುಶಾಲೇಂದ್ರ ಸಿಂಗ್ ಪಟೇಲ್ ರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ವಿಚಿತ್ರ ವೆಂದರೆ ಕುಶಾಲೇಂದ್ರ ಸಿಂಗ್ ಪಟೇಲ್ ಅವರು ಫುಲ್ಪುರದಿಂದ ಸ್ಪರ್ಥಿಸಲು ಸಿದ್ಧರಿರಲಿಲ್ಲವಂತೆ, ಅವರು ಗೋರಖ್ ಪುರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರಂತೆ. ಆದರೆ ಜಾತಿವಾರು ಲೆಕ್ಕಾಚಾರ ಹಾಕಿದ್ದ ಬಿಜೆಪಿ ಫುಲ್ಪುರದಿಂದಲೇ ಕುಶಾಲೇಂದ್ರ ಸಿಂಗ್ ಪಟೇಲ್  ಅವರು ಸ್ಪರ್ಧಿಸುವಂತೆ ಒತ್ತಡ ಹೇರಿ ಇದೀಗ ಕೈಸುಟ್ಟುಕೊಂಡಿದೆ. 
6.ಎಸ್ ಪಿ ಚಾಣಾಕ್ಷ ನಡೆ
ಇನ್ನು ಗೋರಖ್ ಪುರದಲ್ಲಿ ಸಮಾಜವಾದಿ ಪಕ್ಷವಿಟ್ಟ ಚಾಣಾಕ್ಷ ನಡೆ ಅದರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಗೋರಖ್ ಪುರದಲ್ಲಿ ಬಹುಸಂಖ್ಯಾತ ನಿಶಾದ್ ಸಮುದಾಯದ ಅಭ್ಯರ್ಥಿಯನ್ನು ಎಸ್ ಪಿ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ನಿರ್ಧಾರ ಮಾಡಿತ್ತು. ಅದರಂತೆ ನಿಶಾದ್ ಸಮುದಾಯದ ಮುಖಂಡ ಪ್ರವೀಣ್ ಕುಮಾರ್ ನಿಶಾದ್ ರನ್ನು ತನ್ನ ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ಗೋರಖ್ ಪುರದಲ್ಲಿ ತಮ್ಮ ಸ್ಪರ್ಧೆ ಖಚಿತವಾಗುತ್ತಿದ್ದಂತೆಯೇ ಪ್ರವೀಣ್ ಕುಮಾರ್ ನಿಶಾದ್ ನೇರ ಗೋರಖ್ ಪುರ ಆಶ್ರಮಕ್ಕೆ ಧಾವಿಸಿ ಗೋರಖ್ ನಾಥನ ದರ್ಶನ ಪಡೆದಿದ್ದರು. ಆ ಮೂಲಕ ಹಿಂದೂ ಮತಗಳ ಓಲೈಕೆಗೆ ಪ್ರಯತ್ನಿಸಿದ್ದರು. ಅಲ್ಲದೆ ಗೋರಖ್ ಪುರ ಆಶ್ರಮದ ಪ್ರಧಾನ ಅರ್ಚಕರು, ಸ್ವಾಮಿಗಳನ್ನು ಕಂಡ ಅಶೀರ್ವಾದ ಪಡೆದಿದ್ದರು.
7. ಬಿಜೆಪಿ ತಿರುಗುಬಾಣವಾದ ಹಿಂದುತ್ವವಾದ
ಇನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಸಿಎಂ ಆಗುತ್ತಿದ್ದಂತೆಯೇ ತಮ್ಮ ಪ್ರಬಲ ಹಿಂದುತ್ವವಾದ ಪ್ರತಿಪಾದನೆಗೆ ಮುಂದಾದರು. ರಾಜ್ಯ ಪ್ರವಾಸಿ ತಾಣಗಳಿಂದ ತಾಜ್ ಮಹಲ್ ಗೆ ಗೇಟ್ ಪಾಸ್, ಮದರಸಾ ಗೋಡೆಗಳಿಗದೆ ಕೇಸರಿ ಬಣ್ಣ ಬಳಿಯುವ ಪ್ರಕ್ರಿಯೆ, ಗೋರಕ್ಷಣೆ ಹೆಸರಲ್ಲಿ ದಾಳಿ ಮಾಡುತ್ತಿದ್ದವರ ವಿರುದ್ಧ ಏನೂ ಕ್ರಮ ಜರುಗಿಸದೇ ಯೋಗಿ ಮತದಾರರ ಅಸಮಾಧಾನಕ್ಕೆ ಗುರಿಯಾಗಿದ್ದರು. ಆದರೆ ಯೋಗಿ ಅವರ ಈ ನಡೆ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿ ತಮ್ಮ ಸ್ವಕ್ಷೇತ್ರವನ್ನೇ ಕಳೆದುಕೊಳ್ಳುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com