

ಮುಂಬೈ : ಪ್ರತಿಷ್ಠೆ ಹಾಗೂ ಒಣಜಂಭದಿಂದಾಗಿ ಉತ್ತರಪ್ರದೇಶ ಗೋರಖ್ ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಶರಣಾಗಿದ್ದು, 2019ರ ಸಾರ್ವತ್ರಿಕ ಚುನಾವಣೆ ವೇಳೆಗೆ ಬಿಜೆಪಿ ಲೋಕಸಭೆಯಲ್ಲಿ 110 ಸ್ಥಾನಗಳನ್ನು ಹೊಂದಲಿದೆ ಎಂದು ಎನ್ ಡಿಎ ಅಂಗಪಕ್ಷವಾಗಿರುವ ಶಿವಸೇನಾ ಮುಖವಾಣಿಯಲ್ಲಿ ಹೇಳಲಾಗಿದೆ.
ತಮ್ಮ ಸ್ನೇಹಿತರು ಹಾಗೂ ಮೈತ್ರಿ ಮಾರ್ಗ ಮರೆಯುವರೆಗೆ ದೊಡ್ಡ ಮಟ್ಟದ ನಷ್ಟ ಉಂಟಾಗಲಿದೆ ಎಂದು ಶಿವಸೇನಾ ಟಾಂಗ್ ನೀಡಿದೆ.
ತ್ರಿಪುರಾದಂತಹ ಸಣ್ಣ ರಾಜ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿ ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವರ್ಚಸ್ಸು ಕಳೆದುಕೊಂಡಿದೆ . ಇದು ಬಿಜೆಪಿ ಕ್ಯಾಂಪಿನಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ಹೇಳಲಾಗಿದೆ.
ಗೋರಖ್ ಪುರ ಹಾಗೂ ಫುಲ್ಪುರ್ ಎರಡೂ ಕ್ಷೇತ್ರಗಳಲ್ಲಿಯೂ ಸಮಾಜವಾದಿ ಗೆದಿದ್ದೆ,ಬಿಜೆಪಿ ಅಧಿಕಾರಕ್ಕೆ ಬಂದ ನಂತರ 10 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, 9ರಲ್ಲಿ ಬಿಜೆಪಿ ಸೋತಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.
ಲೋಕಸಭೆಯಲ್ಲಿ 282 ಸಂಸದರನ್ನು ಹೊಂದಿದ್ದ ಬಿಜೆಪಿ ಈಗ 272ಕ್ಕೆ ಇಳಿದಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನಾಯಕತ್ವದಲ್ಲಿ ಬಿಜೆಪಿ ಎಲ್ಲಾ ಉಪಚುನಾವಣೆಯಲ್ಲೂ ಸೋತಿದೆ ಎಂದು ಉದ್ದವ್ ಠಾಕ್ರೆ ನಾಯಕತ್ವದ ಶಿವಸೇನಾ ಹೇಳಿದೆ.