ಪಾಟ್ನಾ: ಡ್ರಗ್ಸ್ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಕ್ಷಮೆ ಕೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ಕ್ಷಮೆ ಕೇಳುವುದಾದರೆ ಆರೋಪ ಮಾಡಿದ್ದು ಏಕೆ? ಯಾರೂ ಸಹ ಕ್ಷಮೆ ಕೇಳುವಂತಹ ತಪ್ಪು ಮಾಡಬಾರದು ಎಂದು ದೆಹಲಿ ಸಿಎಂಗೆ ಅಣ್ಣಾ ಹಜಾರೆ ಟಾಂಗ್ ನೀಡಿದ್ದಾರೆ.
ತಪ್ಪು ಮಾಡುವುದು ಮತ್ತು ಕ್ಷಮೆ ಕೇಳುವುದು ಎರಡು ಒಂದೇ. ಹೀಗಾಗಿ ಆರೋಪ ಮಾಡಿ, ಈಗ ಕ್ಷಮೆ ಕೇಳಿದ್ದು ಏಕೆ? ಎಂದು ಅಣ್ಣಾ ಹಜಾರೆ ಅವರು ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದಾರೆ.
ಮಜಿಥಿಯಾ ಅವರು ಪಂಜಾಬ್ ನಲ್ಲಿ ಡ್ರಗ್ಸ್ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಕೇಜ್ರಿವಾಲ್ ಅವರು ಆರೋಪಿಸಿದ್ದರು. ಈ ಸಂಬಂಧ ಮಜಿಥಿಯಾ, ಕೇಜ್ರಿವಾಲ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ಕಳೆದ ಗುರುವಾರ ಆಧಾರ ರಹಿತ ಆರೋಪಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಕ್ಷಮೆ ಕೇಳಿ ಪತ್ರ ಬರೆದಿದ್ದು, ಅದನ್ನು ಮಜಿಥಿಯಾ ಅವರು ಕೋರ್ಟ್ ಗೆ ಸಲ್ಲಿಸಿದ್ದಾರೆ.