ಜೆಡಿಯು ಮತ್ತು ಬಿಜೆಪಿ ಪಕ್ಷಗಳು ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸೇವೆ ಪಡೆದಿದ್ದವು: ರಣ್ ದೀಪ್ ಸುರ್ಜೇವಾಲಾ

ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ 2014ಕ್ಕೂ ಮೊದಲೇ ಅಂದರೆ 2010ರ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸೇವೆ ಪಡೆದಿತ್ತು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯಿಂದ ಫೇಸ್ ಬುಕ್ ಮಾಹಿತಿ ಸೋರಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ 2014ಕ್ಕೂ ಮೊದಲೇ ಅಂದರೆ 2010ರ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸೇವೆ ಪಡೆದಿತ್ತು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಫೇಸ್ ಬುಕ್ ದತ್ತಾಂಶ ಸೋರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂಬ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ರಣ್ ದೀಪ್ ಸುರ್ಜೇವಾಲಾ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಮೂಲದಿಂದಲೂ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸೇವೆ ಪಡೆದಿಲ್ಲ. ಆದರೆ 2010ರಲ್ಲಿ ಬಿಜೆಪಿ ಮಿತ್ರ ಪಕ್ಷ ಜೆಡಿಯು ಈ ಸಂಸ್ಥೆಯ ಸೇವೆ ಪಡೆದಿತ್ತು ಎಂದು ಆರೋಪಿಸಿದ್ದಾರೆ.
"ಕೇಂಬ್ರಿಡ್ಜ್ ಅನಲಿಟಿಕ್ಸ್ ಸಂಸ್ಥೆಯಿಂದ ರಾಹುಲ್ ಗಾಂಧಿಯಾಗಲೀ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಯಾವುದೇ ರೀತಿಯ ಸೇವೆ ಪಡೆದಿಲ್ಲ. ಬಿಜೆಪಿಯ ರವಿಶಂಕರ್ ಪ್ರಸಾದ್ ಅವರು ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದು, ಸ್ವತ- ಬಿಜೆಪಿ ಪಕ್ಷವೇ ಸುಳ್ಳಿನ ಕಂತೆಗಳ ಕಾರ್ಖಾನೆಯಾಗಿದ್ದು, ದಿನಕ್ಕೊಂದು ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ನಕಲಿ ಹೇಳಿಕೆಗಳು, ನಕಲಿ ಪತ್ರಿಕಾ ಗೋಷ್ಠಿಗಳು, ನಕಲಿ ಅಜೆಂಡಾಗಳು ಇವೆಲ್ಲಾ ಬಿಜೆಪಿ ಲಕ್ಷಣಗಳಾಗಿವೆ ಎಂದು  ಸುರ್ಜೇವಾಲಾ ಹೇಳಿದ್ದಾರೆ.
ಅಂತೆಯೇ ಕೇಂಬ್ರಿಡ್ಜ್ ಅನಲಿಟಿಕ್ಸ್ ಸಂಸ್ಥೆಯ ಸಂಪರ್ಕವಿರುವ ವೆಬ್ ಸೈಟ್ ಗಳಲ್ಲಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಈ ಸಂಸ್ಥೆಯ ಸೇವೆ ಪಡೆದಿರುವ ಕುರಿತು ದತ್ತಾಂಶಗಳು ಲಭ್ಯವಾಗಿದ್ದು, ಕೇಂಬ್ರಿಡ್ಜ್ ಅನಲಿಟಿಕ್ಸ್ ಸಂಸ್ಥೆ ತನ್ನ ಭಾರತೀಯ ಪಾಲುದಾರ ಸಂಸ್ಥೆಯಾಗಿರುವ ಒವ್ಲೆನೆ ಬಿಸಿನಿಸ್ ಇಂಟೆಲಿಜೆನ್ಸ್ ಸಂಸ್ಥೆಯ ಮೂಲಕ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಗೆ ಬಿಜೆಪಿ ಮೈತ್ರಿಕೂಟದ ಪ್ರಭಾವಿ ಸಂಸದನ ಪುತ್ರ ನೇತೃತ್ವ ವಹಿಸಿಕೊಂಡಿದ್ದ. ಇದೇ ಸಂಸ್ಥೆಯ ಸೇನೆಯನ್ನು 2009ರಲ್ಲಿ ಹಾಲಿ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರೂ ಕೂಡ ಬಳಕೆ ಮಾಡಿಕೊಂಡಿದ್ದರು ಎಂದು ರಣ್ ದೀಪ್ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com