ನಾಪತ್ತೆಯಾಗಿದ್ದ ದೆಹಲಿ ವಿವಿ ವಿದ್ಯಾರ್ಥಿ ಮೃತದೇಹ ಪತ್ತೆ

ಮಾರ್ಚ್.22 ರಂದು ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಮೃತದೇಹ ಗುರುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ; ಮಾರ್ಚ್.22 ರಂದು ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಮೃತದೇಹ ಗುರುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 
ನಾಪತ್ತೆಯಾಗಿದ್ದ ಆಯುಷ್ ಎಂಬ ವಿದ್ಯಾರ್ಥಿಯ ಮೃತದೇಹ ದ್ವಾರಕಾ ಎಂಬ ಪ್ರದೇಶದ ಚರಂಡಿಯಲ್ಲಿ ದೊರತಿದೆ ಎಂದು ತಿಳಿದುಬಂದಿದೆ. 
ಮಾರ್ಚ್22 ರಂದು ಆಯುಷ್ ತಂದೆಗೆ ಸಂದೇಶ ಕಳುಹಿಸಿರುವ ಅಪಹರಣಕಾರರು ರೂ.50 ಲಕ್ಷ ಕೊಟ್ಟರೆ, ಪುತ್ರನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸಂದೇಶ ಹಿನ್ನಲೆಯಲ್ಲಿ ಆಯುಷ್ ತಂದೆ ಪಲಾಮ್ ಗ್ರಾಮ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸು ತನಿಖೆ ಆರಂಭಿಸಿದ್ದಾರೆ. 
ಮಾರ್ಚ್ 26 ರಂದು ಕೂಡ ಅಪಹರಣಕಾರರು ಆಯುಷ್ ತಂದೆಗೆ ಮತ್ತೊಂದು ಸಂದೇಶವನ್ನು ಕಳುಹಿಸಿದ್ದು, ಉತ್ತಮ್ ನಗರ ಪ್ರದೇಶದ ಬಳಿ ಹಣವನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ನಾಗರೀಕ ವಸ್ತ್ರ ಧರಿಸಿದ 30 ಪೊಲೀಸರ ತಂಡವನ್ನು ಸ್ಥಳದಲ್ಲಿ ನಿಯೋಜಿಸಿದ್ದಾರೆ. ಈ ವೇಳೆ ಹಣವನ್ನು ತೆಗೆದುಕೊಂಡು ಹೋಗಲು ಬಂದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಅಪಹರಣಕಾರ ಹಣವನ್ನು ತೆಗೆದುಕೊಂಡು ಹೋಗಲು ಬಂದಿಲ್ಲ. 
ಇದಾದ ಬಳಿಕ ಮಾರ್ಚ್ 28 ರಂದು ಪೊಲೀಸರಿಗೆ ದ್ರಾರಕಾ ಸೆಕ್ಟರ್ 18 ರಲ್ಲಿರುವ ಚರಂಡಿಯಲ್ಲಿ ಆಯುಷ್ ಮೃತದೇಹ ದೊರಕಿದೆ. 
ಆಯುಷ್ ಡೇಟಿಂಗ್ ಆ್ಯಪ್ ಗಳನ್ನು ಪ್ರತಿದಿನ ಬಳಸುತ್ತಿದ್ದ. ನಾಪತ್ತೆಯಾಗುವುದಕ್ಕೂ ಕೆಲ ದಿನಗಳ ಹಿಂದಷ್ಟೇ ಅನಾಮಧೇಯ ವ್ಯಕ್ತಿಗಳ ಪರಿಚಯವಾಗಿದೆ. ಇದರ ಆಧಾರದ ಮೇರೆಗೆ ಅಧಿಕಾರಿಗಳು ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
ಉತ್ತಮ ನಗರದ ನಿವಾಸಿ ಇಶ್ತಿಯಾಕ್ ಅಲಿ  (25) ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ಪೋಷಕರ ಗಮನವನ್ನು ಬೇರೆಡೆಗೆ ಸೆಳೆಯಲು ಹಣವನ್ನು ಕೇಳಲಾಗಿತ್ತು. ಈ ವೇಳೆ ಮೃತದೇಹವನ್ನು ನಾಶಪಡಿಸಲು ಯತ್ನ ನಡೆಸಲಾಗಿತ್ತು ಎಂದು ಹೇಳಿದ್ದಾರೆ. 
ಆರೋಪಿ ಹಾಗೂ ಆಯುಷ್ ಇಬ್ಬರು 10 ದಿನಗಳ ಹಿಂದೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದಾರೆ. ಬಳಿಕ ಮೂರು ಬಾರಿ ಇಬ್ಬರೂ ಭೇಟಿಯಾಗಿದ್ದಾರೆ. ಮಾ.21 ರಂದು ದ್ವಾರಕಾ ಸೆಕ್ಟರ್ 13ರಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಭೇಟಿಯಾಗಿದ್ದಾರೆ. ಇಬ್ಬರ ಭೇಟಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ವೇಳೆ ಇಬ್ಬರ ನಡುವೆ ಯಾವುದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ಆಯುಷ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆಂದು ಜಂಟಿ ಪೊಲೀಸ್ ಅಧಿಕಾರಿ ಅಜಯ್ ಚೌಧರಿಯವರು ತಿಳಿಸಿದ್ದಾರೆ. 
ದೇಹವನ್ನು ನಾಶಪಡಿಸಲು ಬಳಸಿದ್ದ ವಾಹನ ಹಾಗೂ ಆರೋಪಿಯ ಮೊಬೈಲ್ ಫೋನ್'ನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com