ಕಾವೇರಿ ನಿರ್ವಹಣಾ ಮಂಡಳಿ: ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ತಮಿಳುನಾಡು

ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಸುಪ್ರೀಂ ನೀಡಿದ್ದ ಗಡುವಿನ ಅಂತ್ಯದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿಲ್ಲ ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಸುಪ್ರೀಂ ನೀಡಿದ್ದ ಗಡುವಿನ ಅಂತ್ಯದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದೆ. 
ಕಳೆದ ಫೆಬ್ರವರಿ 16ರಂದು ಕಾವೇರಿ ಅಂತಿಮ ತೀರ್ಪು ನೀಡಿದ್ದು, ಆರು ವಾರಗಳೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಆರು ವಾರಗಳ ಗಡುವು ನಿನ್ನೆಗೆ ಪೂರ್ಣವಾಗಿದೆ. ಹೀಗಿದ್ದೂ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನಾ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಮತ್ತು ಶೀಘ್ರ ಕಾವೇರಿ ನಿರ್ವಹಣಾ ಮಂಡಲಿ ರಚನೆ ಮಾಡುವಂತೆ ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದೆ.
ತಮಿಳುನಾಡು ಸರ್ಕಾರ ಕಲಂ 129 ಮತ್ತು 1971 ರ ನ್ಯಾಯಾಂಗ ನಿಂದನೆ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ. ಅರ್ಜಿಯಲ್ಲಿ ಕೇಂದ್ರ ಸರ್ಕಾರ ಉದ್ದೇಶಪೂರ್ವಕ ಅಸಹಕಾರ ತೋರುತ್ತಿದ್ದು, ಇದೇ ಕಾರಣಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಮುಂದಾಗುತ್ತಿಲ್ಲ. ಇದು ತಮಿಳುನಾಡು ಜನತೆ ಮತ್ತು ರೈತರ ಹಿತಾಸಕ್ತಿಯ ವಿಚಾರವಾಗಿದ್ದು, ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ ಎಂದು ತನ್ನ ಅರ್ಜಿಯಲ್ಲಿ ಹೇಳಿದೆ.
ಫೆ. 16 ಕಾವೇರಿ ಜಲವಿವಾದ ಕುರಿತು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಆರು ವಾರಗಳಲ್ಲಿ ಸ್ಕೀಂ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸ್ಕೀಂ ಎಂದರೆ ಮಂಡಳಿ ಎನ್ನುತ್ತಿರುವ ತಮಿಳುನಾಡು, ಸುಪ್ರೀಂಕೋರ್ಟ್ ನೀಡಿದ್ದ ಗಡುವು ಮಾರ್ಚ್ 29ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು(ಮಾರ್ಚ್ 31) ಕೇಂದ್ರ ಸರ್ಕಾರದ ವಿರುದ್ದ ನ್ಯಾಯಾಂಗ ನಿಂದನೆ‌ ದೂರು ಸಲ್ಲಿಸಿದೆ. ತಮಿಳುನಾಡು ವಕೀಲ ಶೇಖರ್ ನಫ್ಡೆ ಅವರು ಈ ಸಂಬಂಧ ದೂರು ಸಲ್ಲಿಸಿದ್ದಾರೆ.  ಇಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೂರು ದಾಖಲಿಸಿರುವ ತಮಿಳುನಾಡು ಪರ ವಕೀಲರು, ಕರ್ನಾಟಕದ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದೆ.
ಸ್ಪಷ್ಟನೆಗಾಗಿ ಕೇಂದ್ರ ಸರ್ಕಾರದ ಮೇಲ್ಮನವಿ
ಮತ್ತೊಂದೆಡೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ, ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ನೀರು ಹಂಚಿಕೆಗಾಗಿ ಯೋಜನೆ ರೂಪಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಯೋಜನೆ ಎಂದರೆ ಏನು ಎಂಬ ಬಗ್ಗೆ ವಿವರಿಸಿಲ್ಲ. ನದಿ ನೀರು ನಿರ್ವಹಣಾ ಮಂಡಳಿ ರೂಪಿಸುವಂತೆ ತಮಿಳುನಾಡು ಬೇಡಿಕೆ ಇರಿಸಿದೆ. ಮುಂದೆ ಯಾವುದೇ ರೀತಿಯ ಕಾನೂನು ತೊಡಕುಗಳು ಎದುರಾಗುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್‌ ಸ್ಪಷ್ಟನೆ ನೀಡಬೇಕೆಂದು ಕೋರಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com