ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ...
ಚಂಡೀಗಢ: ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ.
ನಿರಾನ್ಕಾರಿ ಭವನ ಪ್ರಾರ್ಥನಾ ಮಂದಿರವಾಗಿದೆ. ಮಂದಿರದಲ್ಲಿ ಹಲವರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ನಿರಾನ್ಕಾರಿ ಭವನದಲ್ಲಿ ಸ್ಫೋಟ ಸಂಭವಿಸಿದ್ದು ಮೂವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದಾರೆಂದು ಐಜಿ ಸುರೇಂದ್ರ ಪಾಲ್ ಸಿಂಗ್ ಪರ್ಮರ್ ಅವರು ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದು, ದ್ವಿಚಕ್ರ ವಾಹನದಲ್ಲಿ ಬಂದ ಮುಸುಕುಧಾರಿ ಮೂವರು ವ್ಯಕ್ತಿಗಳು ಮಂದಿರದ ಮೇಲೆ ಗ್ರೆನೇಡ್ ದಾಳಿ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದರು ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ದಾಳಿ ನಡೆಯುವ ಕುರಿತು ಗುಪ್ತಚರ ಇಲಾಖೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿತ್ತು ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ.