

ನವದೆಹಲಿ: ಮಾಜಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ಸ್ಥಾನದಿಂದ ಕೆಲ ಹೊತ್ತುಗಳ ಕಾಲ ನಿರ್ಗಮಿಸಿ ಮತ್ತೆ ವಾಪಸ್ಸು ಬಂದು ನಿನ್ನೆ ಸುದ್ದಿಯಾದರು. ಈ ಮೂಲಕ ಮತ್ತೊಂದು ನಾಟಕೀಯತೆ ನೋಡಲು ಕೆಲಕಾಲ ವೇದಿಕೆ ಸೃಷ್ಟಿಯಾಗಿತ್ತು.
ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ತೆಗೆದುಹಾಕಿರುವುದರಿಂದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ ಎಂದು ಕೆಲಹೊತ್ತು ಸುದ್ದಿ ವಾಹಿನಿಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿತ್ತು.
ಆದರೆ ಕಾಂಗ್ರೆಸ್ ಈ ವರದಿಯನ್ನು ನಿರಾಕರಿಸಿತ್ತು. ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಈ ಹಿಂದೆ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ರಮ್ಯಾಗಿದ್ದ ದೊಡ್ಡ ಜವಾಬ್ದಾರಿಗಳನ್ನು ಕಾಂಗ್ರೆಸ್ ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಅವರ ಪುತ್ರ ನಿಖಿಲ್ ಆಳ್ವ ಅವರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ರಮ್ಯಾ ಅವರಿಗೆ ಕಡಿಮೆ ಪ್ರಾಮುಖ್ಯತೆ ಸಿಕ್ಕಿದೆ ಎನ್ನಲಾಗುತ್ತಿದೆ.
ನಿಖಿಲ್ ಆಳ್ವ ಅವರು ರಾಹುಲ್ ಗಾಂಧಿಯವರ ಖಾಸಗಿ ಟ್ವಿಟ್ಟರ್ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಹುದ್ದೆ ಮತ್ತು ಜವಾಬ್ದಾರಿಯನ್ನು ಕಡಿಮೆ ಮಾಡಿರುವುದರಿಂದ ಅಸಮಾಧಾನಗೊಂಡಿರುವ ರಮ್ಯಾ ಕಳೆದ ಕೆಲ ದಿನಗಳಿಂದ ಪಕ್ಷದ ಕೆಲಸಕ್ಕೆ ಸರಿಯಾಗಿ ಬರುತ್ತಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಸರಿಯಾಗಿ ಅವರು ಹಠಾತ್ತಾಗಿ ತಮ್ಮ ಟ್ವಿಟ್ಟರ್ ಖಾತೆಯಿಂದ ನಿರ್ಗಮಿಸಿದ್ದು ಅವರು ಪಕ್ಷವನ್ನು ತೊರೆದಿದ್ದಾರೆ ಎಂಬ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿತು.
ಆದರೆ ಕಾಂಗ್ರೆಸ್ ಮಾತ್ರ ರಮ್ಯಾ ಪಕ್ಷ ತೊರೆದಿಲ್ಲ ಎಂದು ಅಧಿಕೃತವಾಗಿಯೇ ವದಂತಿಯನ್ನು ನಿರಾಕರಿಸಿದೆ. ಅದಕ್ಕೆ ಸರಿಯಾಗಿ ನಿನ್ನೆ ಮತ್ತೆ ರಮ್ಯಾರ ಟ್ವಿಟ್ಟರ್ ಖಾತೆಯ ಸ್ಟೇಟಸ್ ನಲ್ಲಿ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಅಂಡ್ ಡಿಜಿಟಲ್ ಕಮ್ಯುನಿಕೇಷನ್ ನ್ನು ನಿರ್ವಹಿಸುತ್ತಿರುವುದಾಗಿ ತಿಳಿಸುತ್ತದೆ.