ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಎರಡೂ ದೇಶಗಳಿಗೆ ಆತಂಕದ ವಿಷಯ: ರಷ್ಯಾ

ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸಿದ ಬ್ರಹ್ಮೋಸ್ ನೌಕಾ ಕ್ಷಿಪಣಿಯ ಪರಮಾಣು ಸಾಮರ್ಥ್ಯದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಶಂಕೆಯ ಮೇಲೆ ರಕ್ಷಣಾ ಸಂಶೋಧನೆ ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ; ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸಿದ ಬ್ರಹ್ಮೋಸ್ ನೌಕಾ ಕ್ಷಿಪಣಿಯ ಪರಮಾಣು ಸಾಮರ್ಥ್ಯದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಶಂಕೆಯ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ)ಯ ಉದ್ಯೋಗಿ ನಿಶಾಂತ್ ಅಗರ್ವಾಲ್ ಬಂಧನ ಕುರಿತು ರಷ್ಯಾ ಮೂಲಗಳಿಂದ ಭಾರತದ ಬಗ್ಗೆ ರಕ್ಷಣಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಹಿತಿ ಸೋರಿಕೆ ರಷ್ಯಾ ಸರ್ಕಾರಕ್ಕೆ ಸಹ ಕಳವಳ, ಆತಂಕವನ್ನುಂಟುಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕ್ಷಿಪಣಿ ಬಗ್ಗೆ ಯಾವ ನಿಖರವಾದ ಮಾಹಿತಿ ಸೋರಿಕೆಯಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಇಂತಹ ಸೂಕ್ಷ್ಮ ವಿಚಾರವನ್ನು ಗೌಪ್ಯವಾಗಿ ರಕ್ಷಿಸುವ ಭಾರತದ ಸಾಮರ್ಥ್ಯದ ಬಗ್ಗೆ ರಷ್ಯಾ ಸರ್ಕಾರಕ್ಕೆ ಸಂಪೂರ್ಣ ವಿಶ್ವಾಸವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ದೇಶದ ರಕ್ಷಣಾ ವಲಯಕ್ಕೆ ಸಂಬಂಧಪಟ್ಟ ಇಂತಹ ಸೂಕ್ಷ್ಮ ವಿಚಾರಗಳು ಎರಡೂ ದೇಶಗಳಿಗೂ ಭದ್ರತೆ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ ಎಂದು ಮೂಲಗಳು ಹೇಳುತ್ತವೆ.

ಬ್ರಹ್ಮೋಸ್ ನೌಕಾ ಕ್ಷಿಪಣಿಯನ್ನು ಜಂಟಿಯಾಗಿ ತಯಾರಿಸುವಾಗ ವಸ್ತುಗಳ ಪೂರೈಕೆ ಸಂದರ್ಭದಲ್ಲಿ ಭದ್ರತೆ ಒದಗಿಸಲು ಭಾರತದ ಕಡೆಯಿಂದ ಮನವಿಗಳು ಬಂದರೆ ಅದು ರಷ್ಯಾಗೆ ಖುಷಿಯ ವಿಚಾರವಾಗಿದೆ. ರಕ್ಷಣಾ ಇಲಾಖೆ ಉದ್ಯೋಗಿಯ ಬಂಧನ ಎರಡೂ ದೇಶಗಳ ನಡುವಿನ ಸಂಬಂಧವನ್ನು ಹಾಳುಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.

ರಕ್ಷಣೆ ದೃಷ್ಟಿಯಿಂದ ಉದ್ಯೋಗಿಯನ್ನು ಬಂಧಿಸಿರುವುದು ಭಾರತದ ಭದ್ರತೆಯ ವ್ಯವಸ್ಥೆಯಲ್ಲಿರುವ ಕಠಿಣ ನಿಲುವನ್ನು ತೋರಿಸುತ್ತದೆ. ಈ ಘಟನೆ ನಮ್ಮ ಸಹಭಾಗಿತ್ವ ಕಾರ್ಯತಂತ್ರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ನಂತರ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸುತ್ತದೆ.

ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಸಮುದ್ರದಲ್ಲಿ ಪ್ರಯಾಣಿಸುವ ಕ್ಷಿಪಣಿ ಎಂದು ಹೇಳಲಾಗುತ್ತಿರುವ ಬ್ರಹ್ಮೋಸ್ ಮಧ್ಯಮ ಶ್ರೇಣಿಯ ರಾಮ್ಜೆಟ್ ಸೂಪರ್ ಸಾನಿಕ್ ನೌಕಾ ಕ್ಷಿಪಣಿಯನ್ನು ರಷ್ಯಾದ ಮಶಿನೋಸ್ಟ್ರೊಯೆನಿಯಾ ಫೆಡರೇಶನ್ ಮತ್ತು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಕಳೆದ ವರ್ಷ ನವೆಂಬರ್ ನಲ್ಲಿ ಭಾರತೀಯ ವಾಯುಪಡೆಯ ಸುಖೊಯ್-30ಎಂಕೆಐ ಯುದ್ಧ ವಿಮಾನ ಆಕಾಶದ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿತ್ತು. ಈ ಮೂಲಕ ಭಾರತೀಯ ಪರಮಾಣು ಕ್ಷಿಪಣಿಯನ್ನು ನೀರಿನ ಒಳಗಿನಿಂದ, ಹಡಗಿನ ಮೂಲಕ, ವಿಮಾನದ ಮೂಲಕ ಮತ್ತು ಭೂಮಿ ಮೇಲೆ ಹಾರಿಸಿದಂತಾಗಿದೆ.

ಭಾರತ-ರಷ್ಯಾ ರಕ್ಷಣಾ ಸಹಕಾರ: ಭಾರತದ ಮಿಲಿಟರಿ ವ್ಯವಸ್ಥೆಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ಸಾಮಗ್ರಿಗಳು ಪೂರೈಕೆಯಾಗುತ್ತಿದ್ದರೂ ಸಹ ಭಾರತೀಯ ಮಿಲಿಟರಿಗೆ ರಷ್ಯಾದ ಸಾಮಗ್ರಿಗಳು ಪ್ರಮುಖ ಬೆನ್ನೆಲುಬಾಗಿವೆ. ಭಾರತದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಾಮಗ್ರಿಗಳ ಆಮದಿನಲ್ಲಿ ಶೇಕಡಾ 60ರಿಂದ 70ರಷ್ಟು ಸಾಮಗ್ರಿಗಳು ರಷ್ಯಾದಿಂದಲೇ ಪೂರೈಕೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com