ಕೋಲ್ಕತಾ: ದಕ್ಷಿಣ ಕೋಲ್ಕತಾದ ಖಾಲಿ ಸ್ಥಳದಲ್ಲಿ ಭಾನುವಾರ 14 ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿದ್ದು, ಕೋಲ್ಕತಾ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ಇಂದು ದಕ್ಷಿಣ ಕೋಲ್ಕತಾದ ಹರಿದೇವಪುರ್ ಪ್ರದೇಶದ ಖಾಲಿ ಸ್ಥಳದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾಗ ಕೊಳೆತ ಸ್ಥಿತಿಯಲ್ಲಿದ್ದ ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿದ್ದು, ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ಭಪಾತ ದಂದೆಯಲ್ಲಿ ತೊಡಗಿದ್ದ ಸಮೀಪದ ಕೆಲ ದುಷ್ಕರ್ಮಿಗಳು ನವಜಾತ ಶಿಶುಗಳನ್ನು ಎಸೆದಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ತೆಯಾದ ಮೃತದೇಹಗಳಲ್ಲಿ ಕೆಲವು ಸಂಪೂರ್ಣ ಕೊಳೆತುಹೋಗಿದ್ದು, ಇನ್ನು ಕೆಲ ದೇಹಗಳು ಕೊಳೆತಿಲ್ಲ ಎಂದು ಅವರು ಹೇಳಿದ್ದಾರೆ.
ಕೋಲ್ಕತಾ ಮೇಯರ್ ಸೋವನ್ ಚಟರ್ಜಿ ಹಾಗೂ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.