ಸಂಗ್ರಹ ಚಿತ್ರ
ದೇಶ
ಸಲಿಂಗಕಾಮ: ಕಾನೂನು ಹೋರಾಟ ಬೆಳೆದು ಬಂದ ಹಾದಿ
ಸಲಿಂಗ ಕಾಮ ಅಪರಾಧ ಎನ್ನುವ 156 ವರ್ಷಗಳ ಹಳೆಯ ಕಾನೂನು ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ಅಧಿಕೃತವಾಗಿ ರದ್ದುಗೊಳಿಸಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ನವದೆಹಲಿ: ಸಲಿಂಗ ಕಾಮ ಅಪರಾಧ ಎನ್ನುವ 156 ವರ್ಷಗಳ ಹಳೆಯ ಕಾನೂನು ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್ ಅಧಿಕೃತವಾಗಿ ರದ್ದುಗೊಳಿಸಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಆ ಮೂಲಕ ಸಲಿಂಗಿಗಳ ಸುಮಾರು 2 ದಶಕಗಳ ಕಾನೂನು ಹೋರಾಟಕ್ಕೆ ಜಯ ದೊರೆತಿದ್ದು, ಸಲಿಂಗಿಗಳ ಕಾನೂನು ಹೋರಾಟ ಬೆಳೆದು ಬಂದ ಹಾದಿ ಸಂಕ್ಷಿಪ್ತ ಕಿರು ಪರಿಚಯ ಇಲ್ಲಿದೆ.
2001: ಇಬ್ಬರು ವಯಸ್ಕರ ನಡುವಣ ಸಮ್ಮತ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಬೇಕು ಎಂದು ಮನವಿ ಮಾಡಿ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ನಾಜ್ ಫೌಂಡೇಷನ್‌ನಿಂದ ದೆಹಲಿ ಹೈಕೋರ್ಟ್‌ಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಕೆ ಮಾಡಿತ್ತು.
2004, ಸೆಪ್ಟೆಂಬರ್ 2: ಅರ್ಜಿ ವಜಾ ಮಾಡಿದ ಹೈಕೋರ್ಟ್. ಅದೇ ತಿಂಗಳು ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರು
ನವೆಂಬರ್ 3: ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಡಿಸೆಂಬರ್: ಹೈಕೋರ್ಟ್ ಆದೇಶದ ವಿರುದ್ಧ ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ
ಏಪ್ರಿಲ್, 2006: ಆದ್ಯತೆಯ ಮೇರೆಗೆ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಗೆ ಸೂಚಿಸಿದ ಸುಪ್ರೀಂ ಕೋರ್ಟ್
ಸೆಪ್ಟೆಂಬರ್, 2008: ಸಲಿಂಗಕಾಮ ಅಪರಾಧವೇ ಅಲ್ಲವೇ ಎಂಬ ವಿಚಾರದಲ್ಲಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳ ನಡುವೆ ಭಿನ್ನಾಭಿಪ್ರಾಯ. ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಮಯ ನೀಡಲು ಹೈಕೋರ್ಟ್ ಗೆ ಕೇಂದ್ರ ಸರ್ಕಾರದಿಂದ ಮನವಿ. ಆದರೆ ಸರ್ಕಾರದ ಮನವಿ ತಿರಸ್ಕಾರ. ಅಂತಿಮ ವಾದ–ಪ್ರತಿವಾದ ಆರಂಭ
ಸೆಪ್ಟೆಂಬರ್ 25: ನೈತಿಕತೆಯ ಆಧಾರದಲ್ಲಿ ಸಲಿಂಗಕಾಮವನ್ನು ಅಪರಾಧ ಎಂದು ಘೋಷಿಸಿ ತಮ್ಮ ಮೂಲಭೂತಹಕ್ಕುಗಳನ್ನು ಸರ್ಕಾರಕ್ಕೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸಲಿಂಗಿಗಳ ಹಕ್ಕುಗಳ ಕಾರ್ಯಕರ್ತರಿಂದ ವಾದ
ಸೆಪ್ಟೆಂಬರ್ 26: ಸಲಿಂಗಕಾಮ ಕಾನೂನಿನ ವಿಚಾರವಾಗಿ ಕೇಂದ್ರ ಗೃಹ ಮತ್ತು ಆರೋಗ್ಯ ಸಚಿವಾಲಯಗಳು ಭಿನ್ನ ನಿಲುವಿನ ಪ್ರಮಾಣಪತ್ರ ಸಲ್ಲಿಸಿದ್ದಕ್ಕೆ ಕೇಂದ್ರಕ್ಕೆ ಹೈಕೋರ್ಟ್ ತರಾಟೆ
‘ಸಲಿಂಗಕಾಮ ಅನೈತಿಕ. ಅದು ಅಪರಾಧ ಅಲ್ಲ ಎಂದು ಘೋಷಿಸಿದರೆ ಸಮಾಜವು ನೈತಿಕವಾಗಿ ಅಧಃಪತನಕ್ಕೆ ಇಳಿಯುತ್ತದೆ’ ಎಂದು ವಾದಿಸಿದ ಕೇಂದ್ರ
ಅಕ್ಟೋಬರ್ 15, 2008: ಸಲಿಂಗಕಾಮದ ಮೇಲೆ ನಿರ್ಬಂಧ ಹೇರಲು ಧರ್ಮಗ್ರಂಥಗಳನ್ನು ಆಧಾರವಾಗಿಟ್ಟುಕೊಂಡ ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಹೈಕೋರ್ಟ್. ವಾದದ ಸಮರ್ಥನೆಗೆ ವೈಜ್ಞಾನಿಕ ವರದಿಗಳನ್ನು ಮಂಡಿಸುವಂತೆ ಸೂಚನೆ
ನವೆಂಬರ್: ‘ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸಂಸತ್ತಿನ ಹಕ್ಕು. ನ್ಯಾಯಾಂಗವು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರದಿಂದ ಲಿಖಿತ ಹೇಳಿಕೆ
ನವೆಂಬರ್ 7: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಜುಲೈ, 2009: ಸಲಿಂಗಿ ಕಾರ್ಯಕರ್ತರ ಅರ್ಜಿ ಮಾನ್ಯ ಮಾಡಿದ ದೆಹಲಿ ಹೈಕೋರ್ಟ್, ಸಲಿಂಗಕಾಮ ಅಪರಾಧ ಅಲ್ಲ ಎಂದು ತೀರ್ಪು
ಜುಲೈ: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದೆಹಲಿಯ ಜ್ಯೋತಿಷಿ. ತದ ನಂತರ ತೀರ್ಪನ್ನು ವಿರೋಧಿಸಿ ಹಲವರಿಂದ ಅರ್ಜಿ
ಫೆಬ್ರುವರಿ 15, 2012: ಅಂತಿಮ ಹಂತದ ದಿನಂಪ್ರತಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್
ಮಾರ್ಚ್ 27, 2012: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಡಿಸೆಂಬರ್ 11,2013: 2009ರ ದೆಹಲಿ ಹೈಕೋರ್ಟ್ ತೀರ್ಪು ವಜಾ ಮಾಡಿದ ‘ಸುಪ್ರೀಂ’. ಸಲಿಂಗಕಾಮ ಅಪರಾಧ ಎಂದು ಘೋಷಣೆ
ಡಿಸೆಂಬರ್ 20, 2013: ಸಲಿಂಗಕಾಮದ ವಿರುದ್ಧ ಹೇರಲಾಗಿರುವ ನಿರ್ಬಂಧವನ್ನು ವಾಪಸ್ ಪಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ.
ಜನವರಿ 28, 2014: ಕೇಂದ್ರ ಸರ್ಕಾರದ ಅರ್ಜಿಯನ್ನು ವಜಾ ಮಾಡಿದ ‘ಸುಪ್ರೀಂ’ ಕೋರ್ಟ್
ಜೂನ್ 30, 2016: ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವಂತೆ ಮನವಿ ಮಾಡಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಐವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ
ಆಗಸ್ಟ್ 24, 2017: ‘ಖಾಸಗಿತನವು ಮೂಲಭೂತ ಹಕ್ಕು’ ಎಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ. ‘ಲೈಂಗಿಕ ಪ್ರವೃತ್ತಿಯು ವ್ಯಕ್ತಿಯೊಬ್ಬನ ಖಾಸಗಿತನದ ಅತ್ಯಂತ ಪ್ರಮುಖ ಭಾಗ’ ಎಂದು ಪ್ರತಿಪಾದನೆ.
ಜನವರಿ 8, 2018: ಐಪಿಸಿ ಸೆಕ್ಷನ್ 377 ಅನ್ನು ಸುಪ್ರೀಂಕೋರ್ಟ್ ನ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್. ‘2013ರ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿಕೆ
ಜುಲೈ 13, 2018: ಸಮ್ಮತಿಯ ಸಲಿಂಗಕಾಮ ಅಪರಾಧಮುಕ್ತಗೊಂಡರೆ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಕಳಂಕ ಮತ್ತು ಅವರನ್ನು ತಾರತಮ್ಯದಿಂದ ನೋಡುವ ಮನೋಭಾವ ತನ್ನಿಂತಾನೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್
ಸೆಪ್ಟೆಂಬರ್ 6, 2018: ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಐಪಿಸಿ ಸೆಕ್ಷನ್ 377 ರದ್ದು ಗೊಳಿಸಿ ಆದೇಶ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ