ಕರ್ತಾರ್ಪುರ ಗಡಿ ಕುರಿತು ಹೇಳಿಕೆ: ಸಿಧುಗೆ ವಾಗ್ದಂಡನೆ ನೀಡಿದ ಸುಷ್ಮಾ ಸ್ವರಾಜ್?
ಕರ್ತಾರ್ಪುರ ಗಡಿ ವಿವಾದ ಕುರಿತು ಹೇಳಿಕೆ ನೀಡಿದ್ದ ಪಂಜಾಬ್ ಸಚಿವ ನವಜೋತೇ ಸಿಂಗ್ ಸಿಧು ಅವರು ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ವೇಳೆ ಸುಷ್ಮಾ ಅವರು ಸಿಧುಗೆ ವಾಗ್ದಂಡನೆ...
ನವದೆಹಲಿ: ಕರ್ತಾರ್ಪುರ ಗಡಿ ವಿವಾದ ಕುರಿತು ಹೇಳಿಕೆ ನೀಡಿದ್ದ ಪಂಜಾಬ್ ಸಚಿವ ನವಜೋತೇ ಸಿಂಗ್ ಸಿಧು ಅವರು ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ವೇಳೆ ಸುಷ್ಮಾ ಅವರು ಸಿಧುಗೆ ವಾಗ್ದಂಡನೆ ನೀಡಿದ್ದರು ಎಂದು ಕೇಂದ್ರ ಸಚಿವೆ ಹಾಗೂ ಅಕಾಲಿ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಮಂಗಳವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಸುಷ್ಮಾ ಸ್ವರಾಜ್ ಅವರನ್ನು ಸಿಧು ಅವರು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಈ ವೇಳೆ ಕರ್ತಾಪುರ ಗಡಿ ವಿವಾದ ಕುರಿತಂತೆ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿತ್ತು.
ಇದರ ಬೆನ್ನಲ್ಲೇ ಇದೀಗ ಹೇಳಿಕೆ ನೀಡಿರುವ ಹರ್ಸಿಮ್ರತ್ ಕೌರ್ ಅವರು, ಸಿಧು ಜೊತೆಗೆ ಮಾತುಕತೆ ನಡೆಸಿದ್ದ ಸುಷ್ಮಾ ಸ್ವರಾಜ್ ಅವರು, ಕರ್ತಾರ್ಪುರ ಗಡಿ ವಿವಾದ ಕುರಿತು ಸುಖಾಸುಮ್ಮನೆ ವಿವಾದ ಸೃಷ್ಟಿ ಮಾಡುತ್ತಿರುವ ಹಿನ್ನಲೆಯಲ್ಲಿ ವಾಗ್ದಂಡನೆ ನೀಡಿದ್ದಾರೆಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಿಧು ಅವರು ಪಾಕಿಸ್ತಾನ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ರಾಜಕೀಯ ಅನುಮತಿಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೂ ವಾಗ್ದಂಡನೆ ನೀಡಿದ್ದಾರೆಂದು ತಿಳಿಸಿದ್ದಾರೆ.