ಬಳ್ಳಾರಿ: ವಿರಳಾತಿ ವಿರಳವಾದ ಹೊಸ ಪ್ರಭೇದದ ಹಾವೊಂದು ಹಂಪಿಯ ಕಮಲಾಪುರದಲ್ಲಿ ಪತ್ತೆಯಾಗಿದೆ.
ಸ್ವೀಡನ್ ಮೂಲದ ಸಸ್ಯಶಾಸ್ತ್ರಜ್ಞ ಮತ್ತು ಸ್ಥಳೀಯ ವನ್ಯಜೀವಿ ತಜ್ಞ ಪೀಟರ್ ಅಲ್ಬಿನ್ಸನ್ ಎಂಬುವವರು ಈ ಹೊಸ ಪ್ರಬೇಧದ ಹಾವನ್ನು ಪತ್ತೆ ಹಚ್ಚಿದ್ದಾರೆ.
ಕಾಡು, ಗುಡ್ಡಗಳತ್ತ ಪ್ರವಾಸ ಕೈಗೊಳ್ಳುವ ಪೀಟರ್ ಅವರು,ಹಂಪಿಯ ದರೋಜಿ ಎಂಬಲ್ಲಿಗೆ ಸ್ಥಳೀಯ ವನ್ಯಜೀವಿ ತಜ್ಞ ಪಂಪಾಯಸ್ವಾಮಿ ಮಾಲ್ಮೇತ್ ಅವರೊಂದಿಗೆ ಭೇಟಿ ನೀಡಿದಾಗ ಈ ಹೊಸ ಪ್ರಭೇದದ ಹಾವು ಪತ್ತೆಯಾಗಿದೆ.
ಹಾವು 12 ಇಂಚಿಗೂ ಕಡಿಮೆ ಇದೆ. ನಡೆದು ಹೋಗುತ್ತಿದ್ದ ವೇಳೆ ಸ್ಥಳದಲ್ಲಿ ಏನೋ ಸರಿದು ಹೋಗುತ್ತಿದ್ದ ಹಾಗೆ ಕಾಣಿಸಿತು. ಅದು ಅಸಾಮಾನ್ಯ ಎಂದು ತಿಳಿದುಬಂದಿತ್ತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಪರಿಶೀಲನೆ ನಡೆಸುವಂತೆ ತಿಳಿಸಿದಾಗ ಅವರು ಹಾವಿನಂತೆ ಕಾಣಿಸುತ್ತಿದೆ ಎಂದು ಹೇಳಿದರು. ಬಳಿಕ ಅದು ಬ್ರೈಡಲ್ ಸ್ನೇಕ್ ಎಂಬುದಾಗಿ ತಿಳಿದುಬಂದಿತು. ಈ ಹಾವು ಕಳೆದ 23 ವರ್ಷಗಳಿಂದ ಎಲ್ಲಿಯೂ ಕಾಣಿಸಿರಲಿಲ್ಲ ಎಂದು ಮಾಲ್ಮೇತ್ ಅವರು ಹೇಳಿದ್ದಾರೆ.
ಹಾವು ಕಟ್ಟುಹಾವಿನಂತೆ ಕಾಣಿಸುತ್ತಿತ್ತು. ಈ ಹಾವು ವಿಷಕಾರಿಯಾಗಿರುವುದಿಲ್ಲ. ಇಂತಹ ಹಾವಿನ ಪ್ರಭೇದವನ್ನು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ. ಇದೊಂದು ಅತ್ಯಂತ ಅದ್ಭುತ ಅನುಭವ. ಹೊಸ ಪ್ರಭೇದದ ಹಾವು ಕಂಡು ಬಹಳ ಸಂತೋಷವಾಯಿತು. ಈ ಹಾವಿನ ಬಗ್ಗೆ ನನ್ನ ಗೆಳೆಯರಿಂದ ಮಾಹಿತಿ ಪಡೆದುಕೊಳ್ಳುತ್ತೇನೆಂದು ಅಲ್ಬಿನ್ಸನ್ ಅವರು ತಿಳಿಸಿದ್ದಾರೆ.