

ನವದೆಹಲಿ: ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿರುವ ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಸಾಧಕ ಬಾಧಕಗಳ ಕುರಿತಂತೆ ಉನ್ನತ ಮಟ್ಟದ ಸಭೆಯಲ್ಲಿ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವಂತಿಲ್ಲ. ಖಾಸಗಿ ಕಂಪನಿಗಳು ಆಧಾರ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದೊಂದು ಚಾರಿತ್ರಿಕ ತೀರ್ಪು ಆಗಿದ್ದು, ಹಣಕಾಸಿನ ಆಡಳಿದಲ್ಲಿ ಸ್ವಚ್ಛತೆಯನ್ನು ಆದೇಶ ಪ್ರೋತ್ಸಾಹಿಸಲಿದೆ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಗೊಳಿಸುವ ಸಂಬಂಧ ಎಲ್ಲಾ ಇಲಾಖೆಗಳಲ್ಲಿ ಪರಿಶೀಲನೆ ನಡೆಸಲಾಗುವುದು, ಒಂದು ವೇಳೆ ಆಧಾರ್ ಬಳಕೆಯಲ್ಲಿ ಖಾಸಗಿ ಕಂಪನಿಗಳು ದುರ್ಬಳಕೆ ಕಂಡುಬಂದಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುವುದು, ಆಧಾರ್ ನೆರವಿನಿಂದ ತಮ್ಮ ಗ್ರಾಹಕರ ಬಗ್ಗೆ ಪರಿಶೀಲನೆ ನಡೆಸುವಂತೆ ಟೆಲಿಕಾಂ ಕಂಪನಿಗಳು ಹಾಗೂ ಬ್ಯಾಂಕುಗಳಿಗೆ ಆದೇಶ ನೀಡಲಾಗಿದೆ ಎಂದು ಪ್ರಸಾದ್ ತಿಳಿಸಿದರು.