

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ಹೊತ್ತಿಕೊಂಡಿರುವ ಕಿಚ್ಚನ್ನು ಆರಿಸಲು ಮುಂದಾಗಿರುವ ಬಿಜೆಪಿ, ಇದಕ್ಕಾಗಿ ರಾಷ್ಟ್ರಾದಾದ್ಯಂತ ಜನ ಸಂಪರ್ಕ ಕಾರ್ಯಕ್ರಮ ಆಯೋಜನೆಗೆ ನಿರ್ಧಾರ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಇನ್ನು 10 ದಿನಗಳಲ್ಲಿ ದೇಶದ 3 ಕೋಟಿಗೂ ಹೆಚ್ಚು ಕುಟುಂಬಗಳ ಸಂಪರ್ಕಕ್ಕಾಗಿ ದೇಶದದಾದ್ಯಂತ 1000 ಬೃಹತ್ ರ್ಯಾಲಿಗಳು ಹಾಗೂ 250 ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ ಮೂಲಕ ಪೌರತ್ವದ ಕಾಯ್ದೆ ಹಾಗೂ ಎನ್ಆರ್'ಸಿ ಬಗ್ಗೆ ಜನಸಾಮಾನ್ಯರಲ್ಲಿ ಪ್ರತಿಪಕ್ಷಗಳು ಹರಡಿರುವ ಸುಳ್ಳುಗಳನ್ನು ಬಯಲು ಮಾಡುತ್ತೇವೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಅವರು ಗುಡುಗಿದ್ದಾರೆ.
ಪೌರತ್ವ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ಸಮಸ್ಯೆಯಾಗುವುದಿಲ್ಲ ಎಂಬುದನ್ನು ಮನವರಿಗೆ ಮಾಡಿಕೊಡಲು ಬಿಜೆಪಿ ಕಾರ್ಯತಂತ್ರದ ರೂಪುರೇಷಗಳನ್ನು ರೂಪಿಸಿದೆ. ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಶನಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯಾದವ್ ಅವರು, ನೂತನ ಕಾಯ್ದೆ ಬಗ್ಗೆ ಜನರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ದೇಶದ ಪ್ರತೀ ಜಿಲ್ಲೆಗಳು ಸೇರಿ ಒಟ್ಟಾರಿ 1000 ರ್ಯಾಲಿ ಹಾಗೂ 250 ಪತ್ರಿಕಾಗೋಷ್ಠಿಗಳನ್ನು ನಡೆಸುತ್ತೇವೆ. ಈ ಮೂಲಕ ಮುಂದಿನ 10 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಕುಟುಂಬಗಳನ್ನು ಭೇಟಿ ಮಾಡಿ, ಎನ್ಆರ್'ಸಿ ಮತ್ತು ಸಿಎಎ ಕುರಿತಾದ ಗೊಂದಲಗಳನ್ನು ನಿವಾರಿಸುತ್ತೇವೆ. ಈ ಮೂಲಕ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹೇಳುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತೇವೆಂದಿದ್ದಾರೆ.