ಕರ್ನಾಟಕ ಬಜೆಟ್ 2019: ಬೆಂಗಳೂರಿಗೆ ಭರಪೂರ ಕೊಡುಗೆ; ಬಿಬಿಎಂಪಿಗೆ 2,300 ಕೋಟಿ ರೂ. ಅನುದಾನ

ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ರಾಜಧಾನಿ ಬೆಂಗಳೂರಿಗೆ ಕುಮಾರಸ್ವಾಮಿ ಅವರು ತಮ್ಮ ಬಜೆಟ್‍ನಲ್ಲಿ ಭರಪೂರ ಕೊಡುಗೆ ಪ್ರಕಟಿಸಿದ್ದಾರೆ.
ಬೆಂಗಳೂರಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ; ಬಿಬಿಎಂಪಿಗೆ 2,300 ಕೋಟಿ ರೂ.ಅನುದಾನ!
ಬೆಂಗಳೂರಿಗೆ ಬಜೆಟ್‌ನಲ್ಲಿ ಭರಪೂರ ಕೊಡುಗೆ; ಬಿಬಿಎಂಪಿಗೆ 2,300 ಕೋಟಿ ರೂ.ಅನುದಾನ!
ಬೆಂಗಳೂರು: ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ರಾಜಧಾನಿ ಬೆಂಗಳೂರಿಗೆ ಕುಮಾರಸ್ವಾಮಿ ಅವರು ತಮ್ಮ ಬಜೆಟ್‍ನಲ್ಲಿ ಭರಪೂರ ಕೊಡುಗೆ ಪ್ರಕಟಿಸಿದ್ದಾರೆ.
ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆ 20 ಕೋಟಿ ಮೀಸಲು,  ಬೆಂಗಳೂರಿನ ಚಲನಶೀಲತೆಗಾಗಿ ಸಮಗ್ರ ಯೋಜನೆ ಜಾರಿ,  ಸಾರ್ವಜನಿಕ ಸಾರಿಗೆ ಮತ್ತು ಸುಸ್ಥಿರತೆಗೆ ಆದ್ಯತೆ, ಬಿಎಂಟಿಸಿಗೆ ಬಸ್ ಸಂಖ್ಯೆ ಹೆಚ್ಚಳ,  ಕನಿಷ್ಠ 50 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿಗೆ ಯೋಜನೆ, ಇದಕ್ಕಾಗಿ 50 ಕೋಟಿ ರೂ. ಅನುದಾನ ಮೀಸಲಿಡುವುದಾಗಿ  ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.   
ಬಿಬಿಎಂಪಿಗೆ 2,300 ಕೋಟಿ ರೂ: 
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 8015 ಕೋಟಿ ರೂ. ಅಂದಾಜು ವೆಚ್ಚದ ನವ ಬೆಂಗಳೂರು ಕ್ರಿಯಾ ಯೋಜನೆ ಅನುಷ್ಠಾನಕ್ಕೆ 2019-20ರಲ್ಲಿ 2,300 ಕೋಟಿ ರೂ. ಅನುದಾನ ಘೋಷಿಸಿರುವ ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ, ಎಲಿವೇಟೆಡ್ ಕಾರಿಡಾರ್ ಯೋಜನೆಗೆ 2019-20ನೇ ಸಾಲಿನಲ್ಲಿ 1,000 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.  ಬೆಂಗಳೂರಿನಲ್ಲಿ 5 ಲಕ್ಷ ಬೀದಿ ದೀಪಗಳನ್ನು ಎಲ್‍ಇಡಿ ದೀಪಗಳಾಗಿ ಪರಿವರ್ತಿಸಲಾಗುವುದು. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಗಳನ್ನು ಪಾದಚಾರಿ ರಸ್ತೆಗಳನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕೆ.ಪಿ.ಸಿ.ಎಲ್ ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ 400 ಮೆಟ್ರಿಕ್ ಟನ್ ಸಾಮರ್ಥ್ಯದ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪಿಸಲಾಗುವುದು.  ಬೆಂಗಳೂರು ನಗರದಲ್ಲಿ “ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆಯ ನೀತಿ” ಜಾರಿಗೊಳಿಸಲಾಗುವುದು. 10,000 ವಾಹನಗಳ ನಿಲುಗಡೆಗೆ 87 ಆಯ್ದ ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು ಎಂದು ಪ್ರಕಟಿಸಿದ್ದಾರೆ.
195 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್‍ಗಳಲ್ಲಿ ಹೆಚ್ಚುವರಿ ಲೂಪ್ ನಿರ್ಮಾಣ, ಗೊರಗುಂಟೆಪಾಳ್ಯದಲ್ಲಿ ಹೊಸ ಅಂಡರ್ ಪಾಸ್ ನಿರ್ಮಾಣವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. 
ಬೆಂಗಳೂರು ಸಬ್-ಅರ್ಬನ್ ರೈಲು ಸೇವೆಗೆ ಒತ್ತು
23,093 ಕೋಟಿ ರೂ. ಅಂದಾಜು ಮೊತ್ತದ ಬೆಂಗಳೂರು ಉಪ ನಗರ ರೈಲು ಸೇವೆ ಯೋಜನೆಗೆ ಚಾಲನೆ ನೀಡಲಾಗಿದೆ. ವಿಶೇಷ ಉದ್ದೇಶಿತ ವಾಹಕ, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಬಿ-ರೈಡ್‍) ಸ್ಥಾಪಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಹೆಬ್ಬಾಳ, ಬೈಯಪ್ಪನಹಳ್ಳಿ, ಕೆ.ಆರ್.ಪುರಂ, ಕಾಡುಗೋಡಿ, ಚಲ್ಲಘಟ್ಟ ಮತ್ತು ಪೀಣ್ಯ ಪ್ರದೇಶಗಳಲ್ಲಿ ಬಹುಮಾದರಿ ಪ್ರಯಾಣ ಹಬ್ (ಬಹು ಮಾದರಿ ಸಾಗಣೆ ಕೇಂದ್ರ) ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಲಾಗುವುದು. 
ಬೆಂಗಳೂರಿನ ಪ್ರಮುಖ ಸ್ಥಳಗಳಾದ ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮತ್ತು ಇತರೆ ಪ್ರದೇಶಗಳಲ್ಲಿ ಮೆಟ್ರೊ ರೈಲು ಮತ್ತು ಟಿ.ಟಿ.ಎಂ.ಸಿ.ಗಳ ಅಂತರ್ ಕ್ರಮ ಸಂಯೋಜನೆ ವಿನ್ಯಾಸ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುವುದು. ಎರಡನೇ ಹಂತದ ನಗರಗಳಲ್ಲಿ ಒಂದು ಪಾರ್ಕಿಂಗ್ ನಿಯಮ ಮತ್ತು ಅನುಷ್ಠಾನ ಯೋಜನೆ ಜಾರಿ ಹಾಗೂ ಸುಧಾರಿತ ಸಂಚಾರ ಮಾಹಿತಿ ಮತ್ತು ನಿರ್ವಹಣಾ ವ್ಯವಸ್ಥೆಯ ಅಧ್ಯಯನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಕೆ ಪರಿಶೀಲನೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಬಜೆಟ್‍ನಲ್ಲಿ ಪ್ರಕಟಿಸಿದ್ದಾರೆ.
ಮೆಟ್ರೋ ಯೋಜನೆಗೂ ಬಜೆಟ್‍ನಲ್ಲಿ ಹಲವು ಕೊಡುಗೆಗಳ ಘೋಷಣೆ:
ಮೆಟ್ರೋ ಮತ್ತು ಬಸ್ ಸೇವೆಗಳಲ್ಲಿ ಬಳಸಬಹುದಾದ ಚಾಲನೆ ಕಾರ್ಡ್‍ಗಳನ್ನು ಪ್ರಾರಂಭಿಸಲಾಗುವುದು.  3 ಕೋಚ್‍ಗಳಿರುವ ಎಲ್ಲಾ 50 ರೈಲುಗಳನ್ನು 6 ಕೋಚ್‍ಗಳ ರೈಲುಗಳಾಗಿ ಪರಿವರ್ತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಿದ್ಯುತ್ ಚಾರ್ಜಿಂಗ್ ಸೌಕರ್ಯ ಕಲ್ಪಿಸಲಾಗುವುದು.  ಕೊನೆಯ ಮೈಲಿನ ಸಂಪರ್ಕ ಸೇವೆಯಾಗಿ ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ಬಿ.ಎಂ.ಟಿ.ಸಿ. ಇಂದ ಸಣ್ಣ ಸಾಮಥ್ರ್ಯದ ಬಸ್‍ಗಳ ಸೌಲಭ್ಯ ಕಲ್ಪಿಸಲಾಗುವುದು. ಯಶವಂತಪುರದಲ್ಲಿ ರೈಲ್ವೇ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರಂ ಮತ್ತು ಹೆಬ್ಬಾಳ ಮಾರ್ಗವಾಗಿ ಹೊರ ವರ್ತುಲ ರಸ್ತೆ–ವಿಮಾನ ನಿಲ್ದಾಣ ಮಾರ್ಗ ನಿರ್ಮಾಣಕ್ಕೆ 16,579 ಕೋಟಿ ರೂ. ಅನುದಾನ ನೀಡಲಾಗುವುದು. ಕೆಂಗೇರಿ ಮೆಟ್ರೋ ಜಾಲದ ಪಶ್ಚಿಮ ತುದಿ ವಿಸ್ತರಿಸಿ ಚಲ್ಲಘಟ್ಟದಲ್ಲಿ ಹೆಚ್ಚುವರಿ ನಿಲ್ದಾಣವನ್ನು ಸ್ಥಾಪಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ 17,200 ಕೋಟಿ ರೂ. ವೆಚ್ಚದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2019-20ನೇ ಸಾಲಿಗೆ 1,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com