ಚೆನ್ನೈ: ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಬಿಜೆಪಿ, ಎಐಎಡಿಎಂಕೆ ಮತ್ತು ಪಿಎಂಕೆ ಮೈತ್ರಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಬುಧವಾರ ಅಧಿಕೃತವಾಗಿ ಘೋಷಿಸಲಾಗಿದೆ.
ಇಂದು ಚೆನ್ನೈನಲ್ಲಿ ನಡೆದ ಉಭಯ ಪಕ್ಷಗಳ ನಾಯಕರ ಸಭೆಯಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಮುಕುಲ್ ವಾಸ್ನಿಕ್ ನೇತೃತ್ವದ ಕಾಂಗ್ರೆಸ್ ನಿಯೋಗ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ.
ತಮಿಳುನಾಡಿನಲ್ಲಿ 39 ಸೀಟುಗಳ ಪೈಕಿ ಕಾಂಗ್ರೆಸ್ಗೆ 9 ಮತ್ತು ಪುದುಚೆರಿಯ ಒಂದು ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ಕಾಂಗ್ರೆಸ್ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದರ ಕುರಿತು ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
2014ರ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದ ಡಿಎಂಕೆ ಈ ಬಾರಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ -ಎಐಎಡಿಎಂಕೆ ಮೈತ್ರಿ ಕೂಟಕ್ಕೆ ಭಾರೀ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳಿವೆ.