

ನವದೆಹಲಿ: ಮೈಸೂರಿನಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದ ವೇಳೆ ತಮ್ಮನ್ನು ಪ್ರಶ್ನಿಸಿದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯೊಂದಿಗೆ ಸಿದ್ದರಾಮಯ್ಯ ಅನುಚಿತ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಮಹಿಳೆಯನ್ನು ಬೈದ ರೀತಿ ಒಂದು ಅಪರಾಧವಾಗಿದ್ದು, ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ರಾಹುಲ್ ಗಾಂಧಿ ಹೇಳಬೇಕು ಎಂದು ಪ್ರಶ್ನಿಸಿರುವ ಜಾವಡೇಕರ್, ಕಾಂಗ್ರೆಸ್ ಪಕ್ಷದವರು ಮಹಿಳೆಯರನ್ನು ಯಾವ ರೀತಿ ನೋಡುತ್ತಾರೆ ಎಂಬುದು ಅದು ತೋರಿಸುತ್ತದೆ. ಒಂದು ಕುಟುಂಬದಿಂದ ಬಂದಿರುವ ಮಹಿಳೆಯರಿಗೆ ಮಾತ್ರ ಅವರು ಗೌರವ ನೀಡುತ್ತಾರೆ ಎಂದು ಟೀಕಿಸಿದ್ದಾರೆ.
ವರುಣ ಕ್ಷೇತ್ರದಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದ ವೇಳೆ ತಮ್ಮನ್ನು ಪ್ರಶ್ನಿಸಿದ ಮಹಿಳೆ ವಿರುದ್ಧ ರೇಗಾಡಿದ ಸಿದ್ದರಾಮಯ್ಯ ಮೈಕ್ ಕಿತ್ತುಕೊಂಡಿದ್ದು, ಮೈಕ್ ಜೊತೆಗೆ ಆಕೆ ಧರಿಸಿದ ದುಪ್ಪಟ್ಟವೂ ಬರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಸಿದ್ದರಾಮಯ್ಯ ಮಹಿಳೆ ಕೈಯಿಂದ ಮೈಕ್ ಕಿತ್ತುಕೊಂಡಾಗ ಮೈಕ್ ಜೊತೆಗೆ ದುಪ್ಪಟವೂ ಬಂದಿದೆ. ಆದರೆ, ಅದರ ಹಿಂದೆ ಯಾವುದೇ ದುರದ್ದೇಶ ಇರಲಿಲ್ಲ ಎಂದಿದ್ದಾರೆ.