

ಕೊಚ್ಚಿ:ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆದಾಯ ಭದ್ರತೆಯ ಭರವಸೆ ನೀಡಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಾಗುವುದು ಎಂದು ಮತ್ತೊಂದು ಭರವಸೆ ನೀಡಿದ್ದಾರೆ.
ಮಹಿಳಾ ಬೂತ್ ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರತಿ ಚುನಾವಣೆಯಲ್ಲಿ ಹೆಚ್ಚಿನ ಯುವಕರು ಮತ್ತು ಮಹಿಳೆಯರು ಪಾಲ್ಗೊಳ್ಳಬೇಕು,ಮಹಿಳೆಯರು ನಾಯಕ ಸ್ಥಾನದಲ್ಲಿ ಇರುವುದನ್ನು ನೋಡಬಯಸುತ್ತೇವೆ. ಕೇರಳದ ನಾಯಕರು ಅತ್ಯಂತ ಸಮರ್ಥರು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದರು.
ಇತ್ತೀಚಿಗೆ ಕಾಂಗ್ರೆಸ್ ಗೆಲುವು ಸಾಧಿಸಿದ ಮೂರು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ರೈತರ ವಿರುದ್ಧ ಮಾಡಿರುವ ಎಲ್ಲಾ ಅನ್ಯಾಯಗಳನ್ನು ಸರಿಪಡಿಸಲಾಗುವುದು ಎಂದರು.