

ಮುಂಬೈ: ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಸೋಮವಾರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ತಮ್ಮ ಮೈತ್ರಿಪಕ್ಷಕ್ಕೆ ಬಹುಮತವಿದೆ ಎಂದು ಸಾಬೀತುಪಡಿಸಲು ಎಲ್ಲಾ ಶಾಸಕರ ಸಹಿ ಕೇಳಲಾಗಿದ್ದು ಅವುಗಳೆಲ್ಲವನ್ನೂ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದರು.
ಸುಪ್ರೀಂ ಕೋರ್ಟ್ ನಲ್ಲಿ ಮಾತ್ರ ನಮಗೆ ನಂಬಿಕೆ ಉಳಿದಿದೆ. ಅಲ್ಲಿ ನ್ಯಾಯ ಸಿಗಬಹುದೆಂಬ ವಿಶ್ವಾಸವಿದೆ, ಬಿಜೆಪಿ ಬಹುಮತವಿಲ್ಲದೆ ಚಂಬಲ್ ಡಕಾಯಿತರ ರೀತಿಯಲ್ಲಿ ಸರ್ಕಾರ ರಚಿಸಿದೆ ಎಂದು ಆರೋಪಿಸಿದರು.
ಈ ಹಿನ್ನಲೆಯಲ್ಲಿ ಇಂದು ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಗವರ್ನರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ನಮ್ಮ ಕಡೆಯಿಂದ ಹಕ್ಕು ಮಂಡಿಸಲಿದ್ದೇವೆ. ಬಿಜೆಪಿಗಿಂತ 10 ಹೆಚ್ಚು ಶಾಸಕರ ಬೆಂಬಲ ನಮಗಿದ್ದು ಅದನ್ನು ಸದನದಲ್ಲಿ ಸಾಬೀತುಪಡಿಸುತ್ತೇವೆ ಎಂದರು.
ಇದೀಗ ಮಹಾರಾಷ್ಟ್ರ ಸರ್ಕಾರ ರಚನೆ ಭವಿಷ್ಯ ಇನ್ನು ಕೆಲವೇ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್ ನೀಡುವ ಆದೇಶದ ಮೇಲೆ ನಿಂತಿದೆ.