

ಮುಂಬೈ; ಮಹಾರಾಷ್ಟ್ರ ನಂತರ ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಕೂಡ ರಾಜಕೀಯ ಭೂಕಂಪ ಅಥವಾ ಪವಾಡ ನಡೆಯಬಹುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಗೋವಾ ಫಾರ್ವರ್ಡ್ ಪಾರ್ಟಿಯ ಅಧ್ಯಕ್ಷ ವಿಜಯ್ ಸರ್ದೇಸಾಯಿ ಸೇರಿದಂತೆ ನಾಲ್ವರು ಶಾಸಕರು ಶಿವಸೇನೆ ಜೊತೆ ಸಂಪರ್ಕದಲ್ಲಿದ್ದಾರೆ. ಹಲವು ಪಕ್ಷಗಳ ಜೊತೆ ಸೇರಿ ಗೋವಾದಲ್ಲಿ ಪ್ರತ್ಯೇಕ ರಂಗವನ್ನು ಸ್ಥಾಪಿಸುವ ಯೋಜನೆಯಲ್ಲಿ ನಾವಿದ್ದೇವೆ. ಗೋವಾದಲ್ಲಿ ಕೂಡ ಸದ್ಯದಲ್ಲಿಯೇ ಪವಾಡ ನಡೆಯಬಹುದು ಎಂಬ ಭಾವನೆಯಲ್ಲಿ ನಾವಿದ್ದೇವೆ ಎಂದು ರಾವತ್ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.
ಆದರೆ ರಾವತ್ ಅವರ ಹೇಳಿಕೆಯನ್ನು ಅಲ್ಲಗಳೆದಿರುವ ಬಿಜೆಪಿ ಇದು ಶಿವಸೇನೆಯ ಕನಸಷ್ಟೆ ಎಂದಿದೆ.