ತಮಿಳುನಾಡಿನಲ್ಲಿ 'ಹೈ' ಅಲರ್ಟ್: ಐಸಿಸ್ ಪರ ಪ್ರಚಾರ, ಕೊಯಮತ್ತೂರಿನ 5 ಕಡೆ ಎನ್ಐಎ ದಾಳಿ

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಕೇರಳ-ತಮಿಳುನಾಡಿನಲ್ಲಿ ಇಸ್ಲಾಮಿಕ್ ಸಂಘಟನೆ ಪರ ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರು ನಗರದ ಐದು ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಿದ್ದು, ಡಿಜಿಟಲ್ ಸಾಧನಗಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಕೇರಳ-ತಮಿಳುನಾಡಿನಲ್ಲಿ ಇಸ್ಲಾಮಿಕ್ ಸಂಘಟನೆ ಪರ ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರು ನಗರದ ಐದು ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಿದ್ದು, ಡಿಜಿಟಲ್ ಸಾಧನಗಳು, ಸಿಮ್ ಕಾರ್ಡ್‌ಗಳು, ಮೆಮೊರಿ ಕಾರ್ಡ್‌ಗಳು ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ, ಎರ್ನಾಕುಲಮ್ ನ ಎನ್ಐಎ ವಿಶೇಷ ನ್ಯಾಯಾಲಯ ನೀಡಿದ್ದ ವಾರಂಟ್ ಆಧಾರದಲ್ಲಿ ದಾಳಿ ಹಾಗೂ ಪರಿಶೀಲನಾ ಕಾರ್ಯ ಕೈಗೊಳ್ಳಲಾಯಿತು ಎಂದು ಎನ್ಐಎ ಮೂಲಗಳು ತಿಳಿಸಿವೆ. ಕೊಯಮತ್ತೂರು ಮೂಲದ ಆರೋಪಿಗಳು  ಮತ್ತು ಅವರ ಸಹವರ್ತಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಆರು ಆರೋಪಿಗಳ ವಿರುದ್ಧ ಮೇ 30 ರಂದು ಎನ್‌ಐಎ ಪ್ರಕರಣ ದಾಖಲಿಸಿದೆ.
  
ನಿಷೇಧಿತ ಭಯೋತ್ಪಾದಕ ಸಂಘಟನೆಯ ಐಸಿಸ್/ ಡೈಶ್ ಸಿದ್ಧಾಂತವನ್ನು ಪ್ರಚಾರ ಮಾಡುವುದು, ದುರ್ಬಲ ಯುವಕರನ್ನು ನೇಮಿಸಿಕೊಳ್ಳುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಈ ಐಸಿಸ್ ಪರ ಘಟಕಗಳು ಯೋಜಿಸಿದ್ದವು. ಭಾರತದಲ್ಲಿ ಐಸಿಸ್ ಮತ್ತು ಡೈಶ್ ಉದ್ದೇಶಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಶ್ರೀಲಂಕಾದ ಐಸಿಸ್ ಹಾಗೂ ಡೈಶ್ ಮುಖಂಡ ಜಹ್ರಾನ್ ಹಾಶಿಮ್ ಮತ್ತು ಅವರ ಸಹಚರರೊಂದಿಗೆ ಕೆಲ ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಬಗ್ಗೆಯೂ ಎನ್ಐಎ ಪತ್ತೆಹಚ್ಚಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಜೂನ್ 12 ರಂದು  ಆರು ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿದ್ದು, ಮೊಹಮ್ಮದ್ ಅಜರುದ್ದೀನ್ ಮತ್ತು ಶೇಕ್ ಹಿದಾಯತುಲ್ಲಾ ಅವರನ್ನು ಬಂಧಿಸಿತ್ತು. ಗುರುವಾರ ಮುಂಜಾನೆ ಕೈಗೊಂಡ ದಾಳಿಯಲ್ಲಿ ಆರೋಪಿಗಳ ಐವರು ಸಹಚರರ ಮನೆಗಳಲ್ಲಿ ಪರಿಶೀಲನೆ ನಡೆಸಿ, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳು, ನಾಲ್ಕು ಸಿಮ್ ಕಾರ್ಡ್, ಒಂದು ಮೆಮೊರಿ ಕಾರ್ಡ್ ಮತ್ತು 8 ಸಿಡಿ ಹಾಗೂ ಡಿವಿಡಿಗಳು ಹಾಗೂ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com