ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳಿಂದ ಬಂದ್‌ಗೆ ಕರೆ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ(ಎಎಎಸ್‍ಯು) ಸೇರಿದಂತೆ ಈಶಾನ್ಯ ಭಾಗದ ವಿದ್ಯಾರ್ಥಿ ಒಕ್ಕೂಟಗಳ ವೇದಿಕೆಯಾದ ಈಶಾನ್ಯ ವಿದ್ಯಾರ್ಥಿ ಒಕ್ಕೂಟ (ಎನ್‍ಇಎಸ್‍ಒ) ಕರೆ ನೀಡಿರುವ 11 ತಾಸಿನ ಬಂದ್‍ನಿಂದಾಗಿ ಅಸ್ಸಾಂನಲ್ಲಿ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬಂದ್, ಸಾಮಾನ್ಯ ಜನ-ಜೀವನ ಅಸ್ತವ್ಯಸ್ತ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

ಗುವಾಹತಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ(ಎಎಎಸ್‍ಯು) ಸೇರಿದಂತೆ ಈಶಾನ್ಯ ಭಾಗದ ವಿದ್ಯಾರ್ಥಿ ಒಕ್ಕೂಟಗಳ ವೇದಿಕೆಯಾದ ಈಶಾನ್ಯ ವಿದ್ಯಾರ್ಥಿ ಒಕ್ಕೂಟ (ಎನ್‍ಇಎಸ್‍ಒ) ಕರೆ ನೀಡಿರುವ 11 ತಾಸಿನ ಬಂದ್‍ನಿಂದಾಗಿ ಅಸ್ಸಾಂನಲ್ಲಿ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿದೆ. 

ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳು ಬಂದ್ ಅನ್ನು ಬೆಂಬಲಿಸಿವೆ. ಟೈರ್‍ಗಳನ್ನು ಸುಡುವುದರ ಮೂಲಕ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರ ರಸ್ತೆಗಳನ್ನು ಪ್ರತಿಭಟನಾಕಾರರು ಮುಚ್ಚಿದ್ದಾರೆ.
ಅನೇಕ ಕಡೆ ರೈಲ್ವೆ ಹಳಿಗಳ ಮೇಲೆ ಕೂತು ಪ್ರತಿಭಟನಾಕಾರರು ಧರಣಿ ನಡೆಸಿದ್ದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.  ವಿವಿಧ ಕಡೆ ಬಂದ್ ಬೆಂಬಲಿಗರು ಅನೇಕ ವಾಹನಗಳನ್ನು ಹಾನಿಗೊಳಿಸಿ, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಇಳಿದಿದ್ದರಿಂದ ಅಲ್ಲಲ್ಲಿ ಹಿಂಸಾಚಾರದ ಘಟನೆಗಳೂ ನಡೆದಿವೆ. 

ಬಂದ್‍ನಿಂದಾಗಿ ಗುವಾಹತಿ ನಗರದಲ್ಲಿ ಅನೇಕ ರಸ್ತೆಗಳನ್ನು ಮುಚ್ಚಿರುವುದರಿಂದ ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.  ನೆರೆ ದೇಶಗಳ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವ ಅಂಶವನ್ನು ಒಳಗೊಂಡಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಸ್ಸಾಂನಲ್ಲಿ ವಿರೋಧಿಸಲಾಗುತ್ತಿದೆ. ಪ್ರತಿಭಟನಾಕಾರರು ಅಸ್ಸಾಂನ ಅನೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು. ದಿಬ್ರುಗಡ ಮತ್ತು ಜೋರ್ಹತ್‌ನಲ್ಲಿ ಪ್ರತಿಭಟನಾಕಾರರು ಟೈರ್‌ ಗಳಿಗೆ ಬೆಂಕಿ ಹಚ್ಚಿದ್ದಾರೆ. 

ಈಶಾನ್ಯ ಭಾರತ ರಾಜ್ಯಗಳಲ್ಲಿ ಕಟ್ಟೆಚ್ಚರ
ಇನ್ನು ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಈಶಾನ್ಯ ಭಾರತ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿದ್ಯಾರ್ಥಿ ಸಂಘಟನೆಗಳ ಬಂದ್ ಹಿನ್ನಲೆಯಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಮುಖವಾಗಿ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಕಳೆದ ರಾತ್ರಿ ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು, ನಾಳೆ ರಾಜ್ಯಸಭೆಯಲ್ಲಿ ಮಸೂದಯನ್ನು ಅಂಗೀಕಾರಕ್ಕಾಗಿ ಮಂಡಿಸಲಾಗುವುದು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com