ಪೌರತ್ವ ತಿದ್ದುಪಡಿ ಮಸೂದೆ: ಪ್ರತಿಭಟನೆ, ಹಿಂಸಾಚಾರದಿಂದ ಅವ್ಯವಸ್ಥೆಯಾಗಿರುವ ಅಸ್ಸಾಂ 

ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಕರ್ಫ್ಯೂ ಧಿಕ್ಕರಿಸಿ ಬೀದಿಗಳಿದು ಹೋರಾಟ ನಡೆಸುತ್ತಿದ್ದ ವೇಳೆ ಪೊಲೀಸರೊಂದಿಗೆ ಘರ್ಷಣೆಯಾದ ಘಟನೆ ನಡೆದಿದೆ.
ಗುವಾಹಟಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು
ಗುವಾಹಟಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು

ಗುವಾಹಟಿ: ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಕರ್ಫ್ಯೂ ಧಿಕ್ಕರಿಸಿ ಬೀದಿಗಳಿದು ಹೋರಾಟ ನಡೆಸುತ್ತಿದ್ದ ವೇಳೆ ಪೊಲೀಸರೊಂದಿಗೆ ಘರ್ಷಣೆಯಾದ ಘಟನೆ ನಡೆದಿದೆ.


ಪೊಲೀಸರ ಲಾಠಿ ಪ್ರಹಾರ, ಆಶ್ರುವಾಯು ಸಿಡಿಸಿದ್ದನ್ನು ಸಹ ಧಿಕ್ಕರಿಸಿ ಹಲವು ಕಡೆಗಳಲ್ಲಿ ಜನರು ಪ್ರತಿಭಟನೆಯಲ್ಲಿ ದಿನವಿಡೀ ತೊಡಗಿದ್ದರು. ನಿನ್ನೆ ಸಂಜೆ ವೇಳೆಗೆ ಅತ್ಯಂತ ಭದ್ರತೆ ಇರುವ ರಾಜ್ಯ ಸಚಿವಾಲಯಕ್ಕೆ ಮೆರವಣಿಗೆ ಸಾಗಿ ಪೊಲೀಸರ ಜೊತೆ ಮುಖಾಮುಖಿ ಸಂಘರ್ಷಕ್ಕಿಳಿದರು.


ನಿನ್ನೆಯ ಪ್ರತಿಭಟನೆಯಲ್ಲಿ ಎಲ್ಲಾ ವಯೋಮಾನದ ಸಮಾಜದ ವಿವಿಧ ವರ್ಗಗಳ ಜನರು ಇದ್ದರು. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಕರು, ಹಿರಿಯರು, ಮಕ್ಕಳು ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಪೌರತ್ವ ತಿದ್ದುಪಡಿ ವಿಧೇಯಕವನ್ನು ಹಿಂತೆಗೆದುಕೊಳ್ಳುವಂತೆ ಬ್ಯಾನರ್ ಹಿಡಿದು ಆಗ್ರಹಿಸಿದರು.


ನಿನ್ನೆ ಅಪರಾಹ್ನದ ಹೊತ್ತಿಗೆ ಕಳೆದ ವರ್ಷವಷ್ಟೇ ಬಿಜೆಪಿ ಸೇರಿದ್ದ ಖ್ಯಾತ ಕಲಾವಿದ ಜೊತಿನ್ ಬೊರಾ ನಿನ್ನೆ ಪಕ್ಷಕ್ಕೆ ರಾಜೀನಾಮೆ ನೀಡಿ ಪ್ರತಿಭಟನೆಯಲ್ಲಿ ಸೇರಿದರು. ನಾಲ್ಕು ದಿನಗಳ ಹಿಂದೆ ಕೇಂದ್ರ ಸರ್ಕಾರದ ಮಸೂದೆಯನ್ನು ವಿರೋಧಿಸಿದ್ದ ಬೊರಾ ಅದನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು.ಅಸ್ಸಾಂ ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಕೂಡ ಪ್ರತಿಭಟನೆ ತೀವ್ರವಾಗಿದೆ. 


ಶಾಂತಿ ಕಾಪಾಡಲು ಸಿಎಂ, ಗವರ್ನರ್ ಮನವಿ: ರಾಜ್ಯಾದ್ಯಂತ ರಾಜಕೀಯ ನಾಯಕರ ಮೇಲೆ ವಿಶೇಷವಾಗಿ ಆಡಳಿತಾರೂಢ ಬಿಜೆಪಿ ನಾಯಕರ ಮೇಲೆ ಜನರ ಆಕ್ರೋಶ ತೀವ್ರವಾಗಿದ್ದು ಈ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮನವಿ ಮಾಡಿದ್ದಾರೆ. 


ಸಾಮಾನ್ಯ ಜನರನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜನರು ಸುಳ್ಳು ಮತ್ತು ತಪ್ಪು ಪ್ರಚಾರಗಳ ಬಲೆಗೆ ಬೀಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. 


ಅಸ್ಸಾಂ ಸ್ಥಾನಮಾನ(Assam Accord) ಸಂಪೂರ್ಣವಾಗಿ ಗೌರವಿಸಲಾಗುತ್ತದೆ ಎಂದು ಪಿಎಂ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ಸಿಎಂ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಸೊಮ್ ಗಣ ಪರಿಷದ್ ನಾಯಕ ಪ್ರಫುಲ್ಲ ಮಹಂತಾ, ಪೌರತ್ವ ತಿದ್ದುಪಡಿ ವಿಧೇಯಕ ಅಸ್ಸಾಮ್ ಸ್ಥಾನಮಾನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಜನರನ್ನು ಲಾಠಿಯಿಂದ ನಿಯಂತ್ರಿಸಲು ಸಾಧ್ಯವಾಗದಿರುವುದರಿಂದ ಪ್ರತಿಭಟನೆ ಕೈಮೀರಿ ಹೋಗಬಹುದು, ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಬಾರದಿತ್ತು ಎಂದು ಮಹಂತ ಅಭಿಪ್ರಾಯಪಟ್ಟರು.


ಜನರು ಶಾಂತಿ, ಸಮಾಧಾನ ಕಾಪಾಡುವಂತೆ ಗವರ್ನರ್ ಜಗದೀಶ್ ಮುಖಿ ಕೂಡ ಮನವಿ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ಕಾನೂನನ್ನು ಕೈಗೆತ್ತಿಕೊಂಡು ಅಲ್ಲ, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com