ಮಕರ ಜ್ಯೋತಿ ಸಮಯದಲ್ಲಿ ಶಬರಿಮಲೆಗೆ ಮಹಿಳೆಯರ ಭೇಟಿ ಸಾಧ್ಯತೆ; ಪೊಲೀಸರಿಗೆ ಭದ್ರತೆಯ ಆತಂಕ

ಮಕರ ಸಂಕ್ರಾಂತಿ ಸಮಯದಲ್ಲಿ ಮಕರ ಜ್ಯೋತಿ ಯಾತ್ರೆಯ ಅಂತಿಮ ಹಂತ ತಲುಪಿದ್ದು ಶಬರಿಮಲೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಮಕರ ಸಂಕ್ರಾಂತಿ ಸಮಯದಲ್ಲಿ ಮಕರ ಜ್ಯೋತಿ ಯಾತ್ರೆಯ ಅಂತಿಮ ಹಂತ ತಲುಪಿದ್ದು ಶಬರಿಮಲೆಗೆ ಹೋಗುವ ಭಕ್ತಾದಿಗಳ ಸಂಖ್ಯೆ ಹೆಚ್ಚಳದ ಮಧ್ಯೆ ಈ ಬಾರಿ ಮಹಿಳೆಯರು ಕೂಡ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಸಹಜವಾಗಿಯೇ ಪೊಲೀಸರಿಗೆ ತೀವ್ರ ವಿರೋಧದ ನಡುವೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಾಗಿದೆ.

ರಾಜ್ಯ ಪೊಲೀಸ್ ವರಿಷ್ಠ ಲೋಕನಾಥ್ ಬೆಹೆರ ನಿನ್ನೆ ಶಬರಿಮಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳುತ್ತೇವೆ. ಮಕರ ಜ್ಯೋತಿ ಸಮಯದಲ್ಲಿ ವಿಶೇಷ ಭದ್ರತೆ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಕರ ಜ್ಯೋತಿ ಸಮಯದಲ್ಲಿ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಕೆಲವು ಸುಧಾರಣಾ ಕ್ರಮಗಳನ್ನು ತರುತ್ತೇವೆ ಎಂದು ಈಗಾಗಲೇ ಕೆಲವು ಪ್ರಗತಿಪರ ಸಂಘಟನೆಗಳು ಹೇಳಿವೆ. ಶಬರಿಮಲೆ ಆದಿವಾಸಿ ಬಲ ಪುನರ್ ಸ್ಥಾಪನಾ ಸಮಿತಿಯ ಸಂಚಾಲಕ ಎಂ ಗೀತನಂದನ್, ಮಕರಜ್ಯೋತಿ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು ಆಗಮಿಸಲಿದ್ದಾರೆ.

ಅಯ್ಯಪ್ಪನ ಸನ್ನಿಧಾನಕ್ಕೆ ಯುವತಿಯರನ್ನು ಮತ್ತು 50 ವರ್ಷದೊಳಗಿನ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಈ ಸಮಿತಿ ಆರಂಭದಲ್ಲಿ ಯೋಜನೆ ಹಾಕಿಕೊಂಡಿದ್ದರೂ ಕೂಡ ಕಳೆದ 2ರಂದು ಕನಕ ದುರ್ಗ ಮತ್ತು ಬಿಂದುವಿನ ಭೇಟಿಯ ನಂತರ ತನ್ನ ನಿರ್ಧಾರವನ್ನು ಅದು ಮುಂದೂಡಿತು.

ಜಾತೀಯತೆ ಮತ್ತು ಬ್ರಾಹ್ಮಣವಾದಿ ವಿರುದ್ಧ ಇದೇ 14ರಂದು ರಾಜ್ಯ ಮಟ್ಟದ ಸಭೆ ನಡೆಸಲಾಗುವುದು. ಸಾಂಕೇತಿಕ ಪ್ರತಿಭಟನೆಯಾಗಿ ತಂತ್ರ ಸಮುಚ್ಚಯದ ಪ್ರತಿಕೃತಿಯನ್ನು ದಹಿಸಲಾಗುವುದು. ಈ ಮಧ್ಯೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಶಬರಿಮಲೆ ಕರ್ಮ ಸಮಿತಿ ಎಚ್ಚರಿಕೆ ನೀಡಿದೆ.

ಸಾವಿರಾರು ವರ್ಷಗಳಿಂದ ಇರುವ ಸಂಪ್ರದಾಯವನ್ನು ಧಿಕ್ಕರಿಸಿ ಮಹಿಳೆಯರನ್ನು ಶಬರಿಮಲೆಗೆ ಕರೆತರುವಲ್ಲಿ ಪ್ರಯತ್ನ ಮಾಡುತ್ತಿರುವ ಎಸ್ ಡಿಪಿಐ, ಪಿಎಫ್ಐ ಮತ್ತು ಮಾವೋವಾದಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸಮಿತಿ ಪ್ರಧಾನ ಸಂಚಾಲಕ ಎಸ್ ಜೆ ಆರ್ ಕುಮಾರ್ ತಿಳಿಸಿದ್ದಾರೆ.

ಬಿಂದು ಮತ್ತು ಕನ್ನಿಕಾ ಭೇಟಿಯ ನಂತರ ದೇವಸ್ಥಾನವನ್ನು ಶುದ್ಧೀಕರಣಗೊಳಿಸಿದ ಕುರಿತು ತಿರುವಂಕೂರು ದೇವಸ್ಥಾನ ಮಂಡಳಿ ಶಬರಿಮಲೆ ತಂತ್ರಿ ಕಂದರಾರು ರಾಜೀವರಾರು ಅವರಿಂದ ವಿವರಣೆ ಕೇಳಿದೆ.

ಈ ಮಧ್ಯೆ ಶಾಸಕ ಎ ಎನ್ ಶಂಸೀರ್, ಸಿಪಿಎಂ ನಾಯಕ ಪಿ ಸಸಿ ಮತ್ತು ಬಿಜೆಪಿ ಸಂಸದ ವಿ ಮುರಳೀಧರನ್ ಅವರ ಮನೆಗಳಿಗೆ ಬಾಂಬ್ ಎಸೆದ ಪ್ರಕರಣವೂ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com