ಐಎಎಫ್ ವಾಯುದಾಳಿಯಲ್ಲಿ 250 ಉಗ್ರ ಹತ್ಯೆ ಎಂದ ಅಮಿತ್ ಶಾ ವಿರುದ್ಧ ವಿಪಕ್ಷಗಳ ಟೀಕಾ ಪ್ರಹಾರ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಿಪಕ್ಷ ನಾಯಕರು ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಿಪಕ್ಷ ನಾಯಕರು ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಿನ್ನೆ ನಡೆದ ಲಕ್ಷ್ಯ್ ಜೀತೋ (ಗುರಿ ಸಾಧಿಸಿ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾ, ಉಗ್ರಗಾಮಿಗಳ ವಿರುದ್ಧದ ವಾಯುಸೇನೆಯ ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಉರಿ, ಪುಲ್ವಾಮ ಪ್ರಮುಖ ಬೆಳವಣಿಗೆಗಳಾಗಿವೆ. ಉರಿ ದಾಳಿಯ ಬಳಿಕ ನಮ್ಮ ಸೇನೆ ಮೊದಲ ಬಾರಿಗೆ ಪಾಕ್ ಗಡಿಯೊಳಗೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿ ಸಾಕಷ್ಟು ಉಗ್ರರನ್ನು ಕೊಂದು ಹಾಕಿತ್ತು. ಆ ಬಳಿಕ ಪುಲ್ವಾಮ ದಾಳಿಯ ಕೇವಲ 12 ದಿನದಲ್ಲಿ ಮತ್ತೆ ಪಿಒಕೆಯಲ್ಲಿ ವಾಯುದಾಳಿ ನಡೆಸಿ ಬಾಲಾಕೋಟ್ ನಲ್ಲಿದ್ದ ಜೈಶ್ ಉಗ್ರ ಕ್ಯಾಂಪ್ ಅನ್ನು ಧ್ವಂಸ ಮಾಡಿದೆ ಎಂದು ಹೇಳಿದ್ದರು.
ಇದೀಗ ಅಮಿತ್ ಶಾ ಅವರ ಈ ಹೇಳಿಕೆ ವಿಪಕ್ಷಗಳ ಟೀಕಾ ಪ್ರಹಾರಕ್ಕ ಕಾರಣವಾಗಿದ್ದು, ವಿಪಕ್ಷ ಮುಖಂಡರು ಅಮಿತ್ ಶಾ ಅವರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ಉಗ್ರ ದಾಳಿಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಎಂದು ಕಿಡಿಕಾರಿದರು. ಬಾಲಾಕೋಟ್ ಉಗ್ರ ದಾಳಿ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಅವರು, ವಿದೇಶಿ ಮಾಧ್ಯಮಗಳು ಪಾಕ್ ಪರ ನಿಲುವು ಹೊಂದಿವೆಯೇ... ವಾಯುದಾಳಿಯಲ್ಲಿ ಸಾವುನೋವು ಸಂಭವಿಸಿಲ್ಲ ಎಂದು ವರದಿ ಮಾಡುತ್ತಿವೆ. ಈ ಬಗ್ಗೆ ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ. ಒಂದೋ ವಿದೇಶಿ ಮಾಧ್ಯಮಗಳು ಪಾಕಿಸ್ತಾನದ ಪರವಾಗಿರಬೇಕು, ಇಲ್ಲವೇ ವಾಯುದಾಳಿ ಸಂಬಂಧ ಮೋದಿ ಹಾಗೂ ಬಿಜೆಪಿ ಸುಳ್ಳು ಹೇಳುತ್ತಿರಬೇಕು ಎಂದು ಕಿಡಿಕಾರಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಟಿಎಂಸಿ ಹಿರಿಯ ಮುಖಂಡ ಡರೇಕ್ ಒಬ್ರಿಯಾನ್ ಅವರೂ ಕೂಡ ವಾಯುದಾಳಿ ಸಂಬಂಧ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಪೂರ್ವ ಯೋಜನೆಗಳಿಲ್ಲದೇ ಪ್ರಧಾನಿ ಮೋದಿ ಸೈನಿಕರನ್ನು ಕಳುಹಿಸುತ್ತಿದ್ದು, ಸೈನಿಕರು ಸಾಯಲೆಂದೇ ಇಂತಹ ಕೆಲಸ ಮಾಡುತ್ತಿದ್ದಾರೆಯೇ..? ಹುತಾತ್ಮ ಸೈನಿಕರ ಭಾವಚಿತ್ರಗಳನ್ನು ಬಿಜೆಪಿ ಮತ್ತು ಮೋದಿ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ನಿಜಕ್ಕೂ ನಿಮಗೆ ನಾಚಿಕೆ ಎಂಬುದೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘಟಕದ ಅಧ್ಯಕ್ಷ ಗುಲಾಮ್ ಅಹ್ಮದ್ ಮೀರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಂತಿ ಮಾತುಗಳನ್ನಾಡುತ್ತಿದ್ದಾರೆ. ಆದರೆ ಅವರ ಮಾತು ಕೇವಲ ಮಾತಾಗಿಯೇ ಇರುವ ಬದಲು ಕೃತಿಯಾಗಬೇಕು. ಶಾಂತಿಯನ್ನು ಅವರು ಕಾರ್ಯಗತಗೊಳಿಸಿ ಆ ನಿಟ್ಟಿನಲ್ಲಿ ಭಾರತ ಸರ್ಕಾರದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com