ಮಹಾಬಲಿಪುರಂನಲ್ಲಿ ಮೋದಿ-ಕ್ಸಿ ಜಿನ್'ಪಿಂಗ್ ಶೃಂಗಸಭೆ: ಉಭಯ ನಾಯಕರ ಸ್ವಾಗತಕ್ಕೆ ಚೆನ್ನೈ ಸಜ್ಜು 

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅ.11 ಮತ್ತು 12ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಹಾಬಲಿಪುರಂನಲ್ಲಿ ಅನೌಪಚಾರಿಕ ಶೃಂಗಸಭೆ ನಡೆಸಲಿದ್ದಾರೆ. ಈ  ಹಿನ್ನಲೆಯಲ್ಲಿ ಉಭಯ ನಾಯಕರನ್ನು ಸ್ವಾಗತಿಸಲು ಚೆನ್ನೈನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. 
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅ.11 ಮತ್ತು 12ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಹಾಬಲಿಪುರಂನಲ್ಲಿ ಅನೌಪಚಾರಿಕ ಶೃಂಗಸಭೆ ನಡೆಸಲಿದ್ದಾರೆ. ಈ  ಹಿನ್ನಲೆಯಲ್ಲಿ ಉಭಯ ನಾಯಕರನ್ನು ಸ್ವಾಗತಿಸಲು ಚೆನ್ನೈನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. 

ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಅವರು ಮಹಾಬಲಿಪುರಂ ಸುತ್ತಮುತ್ತಲಿನ ದೇವಾಲಯಗಳಿಗೆ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಒಟ್ಟಾಗಿ ಭೇಟಿ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಚೆನ್ನೈನ ಸುತ್ತಮುತ್ತಲಿನ ಬೀದಿ ಬೀದಿಗಳಲ್ಲಿ ಭಾರತದ ಸಂಸ್ಕೃತಿ ಸಾರುವ ಬಣ್ಣಬಣ್ಣದ ಚಿತ್ತಾರಗಳು ಕಂಗೊಳಿಸುತ್ತಿವೆ. 

ನಾಳೆ ಮಧ್ಯಾಹ್ನ 2.30ರ ಸುಮಾರಿಗೆ ಕ್ಸಿ ಜಿನ್'ಪಿಂಗ್ ಅವರು ಆಗಮಿಸಲಿದ್ದು, 12.30ರ ಸುಮಾರಿಗೆ ಪ್ರಧಾನಿ ಮೋದಿಯವರು ಆಗಮಿಸುತ್ತಿದ್ದಾರೆ. ಉಭಯ ನಾಯಕರಿಗಾಗಿ ಆರು ಕೊಲ್ಲಿ ಪ್ರದೇಶಗಳು ಹಾಗೂ ಮೂರು ಹೆಲಿಕಾಪ್ಟರ್ ಗಳನ್ನು ಕಾಯ್ದಿರಿಸಲಾಗಿದೆ. ಮಹಾಬಲಿಪುರಂಗೆ ವಾಯು ಮಾರ್ಗದ ಮೂಲಕ ಪ್ರಧಾನಿ ಮೋದಿಯವರು ಆಗಮಿಸಲಿದ್ದು, ಕ್ಸಿ ಜಿನ್ ಪಿಂಗ್ ಅವರು ಯಾವ ಮಾರ್ಗದ ಮೂಲಕ ಆಗಮಿಸಲಿದ್ದಾರೆಂಬುದು ಇನ್ನೂ ಖಚಿತವಾಗಿಲ್ಲ ಎಂದು ವರದಿಗಳು ತಿಳಿಸಿವೆ. 
 
ಉಭಯ ನಾಯಕರು ಮಹಾಬಲಿಪುರಂಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದ ಗೇಟ್5 ರ ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕಾರಗೊಳಿಸಲಾಗುತ್ತಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಗೋಡೆಗಳ ಮೇಲೆ ಭಾರತ ಹಾಗೂ ಚೀನಾ ನಡುವಿನ ಸಾಂಸ್ಕೃತಿಕ ಬಂಧವನ್ನು ಚಿತ್ತಾರಗಳಲ್ಲಿ ಮೂಡಿಸಲಾಗುತ್ತಿದೆ. ಮೀನಾಂಬಕ್ಕಂ ಪೊಲೀಸ್ ಠಾಣೆ ಬಳಿಯಿರುವ ಹಳೇ ಕಟ್ಟಡವನ್ನು ಉದ್ಯಾನವನವಾಗಿ ಪರಿವರ್ತಿಸಲಾಗಿದೆ. ಪಾದಚಾರಿ ಮಾರ್ಗ ಹಾಗೂ ಗೋಡೆಗಳನ್ನು ಬಣ್ಣಗಳಿಂದ ಮಿನುಗುವಂತೆ ಮಾಡಲಾಗುತ್ತಿದೆ. ಪೂರ್ವ ಕರಾವಳಿ ರಸ್ತೆಯ ಪ್ರತೀ 50-100 ಮೀಟರ್ ಗೂ ಕ್ಯಾಮೆರಾಗಳನ್ನು ಇರಿಸಲಾಗುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. 
 
ಅನೌಪಚಾರಿಕ ಶೃಂಗಸಭೆ ವೇಳೆ ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸುವುದು ಹೇಗೆಂಬ ಬಗ್ಗೆ, ಜಾಗತಿಕ ಹಾಗೂ ಪ್ರಾದೇಶಿಕ ಮಹತ್ವದ ವಿಚಾರಗಳ ಬಗ್ಗೆ ಕ್ಸಿ ಹಾಗೂ ಮೋದಿಯವರು ಮಾತುಕತೆ ನಡೆಸಲಿದ್ದಾರೆ. ಆದರೆ, ಯಾವುದೇ ಒಪ್ಪಂದವನ್ನು ಈ ಸಂದರ್ಭದಲ್ಲಿ ಮಾಡಿಕೊಳ್ಳುವುದಿಲ್ಲ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. 

ಇತ್ತೀಚೆಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದನ್ನು ರದ್ದು ಮಾಡಿದ್ದ ಭಾರತದ ನಿರ್ಧಾರವನ್ನು ಪಾಕಿಸ್ತಾನದ ಪರಮಾಪ್ತ ದೇಶವಾದ ಚೀನಾ ವಿಶ್ವಸಂಸ್ಥೆಯಲ್ಲಿ ವಿರೋಧಿಸಿತ್ತು. ಇದು ಉಭಯ ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆದರೆ, ಬುಧವಾರ ಹೇಳಿಕೆ ನೀಡಿರುವ ಚೀನಾ, ಭಾರತ ಮತ್ತು ಪಾಕಿಸ್ತಾನಗಳು ದ್ವಿಪಕ್ಷೀಯ ಮಾತುಕತೆ ನಡೆಸುವ ಮೂಲಕ ಕಾಶ್ಮೀರ ವಿಚಾರವನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಹೇಳುವ ಮೂಲಕ ಭಾರತವನ್ನು ತಣ್ಣಗೆ ಮಾಡುವ ಯತ್ನ ನಡೆಸಿದೆ. 

ಇನ್ನು ಕ್ಸಿ ಅವರೇನಾದರೂ ಕಾಶ್ಮೀರ ವಿಷಯವನ್ನು ಮಾತುಕತೆ ವೇಳೆ ಪ್ರಸ್ತಾಪಿಸಿದರೆ ಮೋದಿಯವರು, ವಿಶೇಷ ಸ್ಥಾನಮಾನ ರದ್ದುಗೊಳಿಸಲು ಇರುವ ಕಾರಣಗಳ ಬಗ್ಗೆ ತಿಳಿಸಿ ಹೇಳಿದ್ದಾರೆ. ಇದೇ ವೇಳೆ ಲಡಾಖನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಿದ ಭಾರತದ ನಿರ್ಧಾರ ಕೂಡ ಚೀನಾಗೆ ಕಸಿವಿಸಿ ತಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕೂಡ ಮೋದಿ ಅವರು ವಿವರಣೆ ನೀಡಲಿದ್ದು, ಲಡಾಖನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದರೂ ಉಭಯ ದೇಶಗಳ ನಡುವಿನ ಗಡಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಸ್ಥಳೀಯ ಜನರ ಬೇಡಿಕೆಯ ಮೇರೆಗೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿ ಹೇಳಲಿದ್ದಾರೆಂದು ಮೂಲಗಳು ತಿಳಿಸಿವೆ. 

ಅರುಣಾಚಲ ಪ್ರದೇಶದ ಜೊತೆಗಿನ ಗಡಿ ವಿವಾದದ ಬಗ್ಗೆಯೂ ಮೋದಿಯವರು ಕ್ಸಿ ಅವರಿಗೆ ವಿವರಣೆ ನೀಡಿ ವಿಶ್ವಾಸವೃದ್ಧಿ ಕ್ರಮಗಳ ಪ್ರಸ್ತಾವ ಇರಿಸಲಿದ್ದಾರೆಂದು ತಿಳಿದುಬಂದಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com