ಭಾರತ-ಚೀನಾ ದ್ವಿಪಕ್ಷೀಯ ಶೃಂಗ ಸಭೆ: ನಿಗದಿತ ಸಮಯಕ್ಕೂ ಮೊದಲೇ ಚೆನ್ನೈ ತಲುಪಿದ ಪ್ರಧಾನಿ ಮೋದಿ
ಚೆನ್ನೈ: ಸಾಂಪ್ರದಾಯಿಕ ಶತ್ರು ರಾಷ್ಟ್ರಗಳಾದ ಭಾರತ ಹಾಗೂ ಚೀನಾ ಮುಖ್ಯಸ್ಥರ ನಡುವೆ ಮತ್ತೊಂದು ಅನೌಪಚಾರಿಕ ಸಭೆ ಶುಕ್ರವಾರ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುಲಿದ್ದು, ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿಯವರು ನಿಗದಿತ ಸಮಯ 75 ನಿಮಿಷಕ್ಕೂ ಮೊದಲೇ ಚೆನ್ನೈ ತಲುಪಿದ್ದಾರೆ.
ಜಾಗತಿಕ ನಾಯಕರಾಗಲು ಪೈಪೋಟಿ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್'ಪಿಂಗ್ ಉಭಯ ದೇಶಗಳ ನಡುವೆ ಇರುವ ಹಲವು ವಿವಾದಗಳಿಂದ ಜಾಗತಿಕ ವೇದಿಕೆಯಲ್ಲಿ ಅಖಂಡ ವೈರಿಗಳೆಂದೇ ಪರಿಗಣಿಸಲ್ಪಡುತ್ತಾರೆ. ಆದರೆ, ಅನೌಪಚಾರಿಕ ಭೇಟಿಯ ವಿಚಾರಕ್ಕೆ ಬಂದಾಗ ಇಬ್ಬರೂ ಇನ್ನಿಲ್ಲದ ಸ್ನೇಹಿತರಂತೆ ಬಿಂಬಿಸಿಕೊಳ್ಳುತ್ತಾ ಬಂದಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಯವರನ್ನು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಹಾಗೂ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳು ಸ್ವಾಗತಿಸಿದರು.
ಸಿಕ್ಕಿಂ ಡೋಕ್ಲಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾದಾಗ ಕಳೆದ ವರ್ಷ 2018ರ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಚೀನಾದ ಜೊತೆಗೆ ಅನೌಪಚಾರಿಕ ಶೃಂಗ ಕೈಗೊಂಡಿದ್ದರು. ಚೀನಾದ ವುಹಾನ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ ಮತ್ತು ಕ್ಸಿ ಜಿನ್'ಪಿಂಗ್ ಭಾಗವಹಿಸಿದ್ದರು. ಇದೀಗ ಮತ್ತೊಮ್ಮೆ ಉಭಯ ನಾಯಕರು ಅನೌಪಚಾರಿಕ ಸಭೆ ನಡೆಸುತ್ತಿದ್ದಾರೆ.
ಅನ್ಯ ದೇಶಗಳ ಜೊತೆಗೆ ಸ್ನೇಹ ವೃದ್ಧಿಗಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆರಂಭಿಸಿದ ಹೊಸ ಪದ್ಧತಿ ಅನೌಪಚಾರಿಕ ಶೃಂಗ. ಇಲ್ಲಿ ಚರ್ಚೆಯಾಗುವ ವಿಷಯಗಳು ಪೂರ್ವ ನಿರ್ಧಾರಿತವಲ್ಲ. ಭೇಟಿ ಬಳಿಕ ಕುಶಲೋಪರಿ ರೀತಿಯಲ್ಲಿ ವಿವಿಧ ವಿಷಯಗಳನ್ನು ಚರ್ಚಿಸಲಾಗುತ್ತದೆ. ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹಾಗೂ ಜಾಗತಿಕ ಶಾಂತಿಗೆ ಮೋದಿ ರೂಪಿಸಿದ ಅಸ್ತ್ರ ಇದು. ಜಾಗತಿಕ ನಾಯಕರ ಜೊತೆಗೆ ಖಾಸಗಿ ಸ್ನೇಹ ವೃದ್ಧಿಕೊಳ್ಳುವುದಕ್ಕೂ ಮೋದಿ ಇಂತಹ ಭೇಟಿಯನ್ನು ಆಯೋಜಿಸುತ್ತಾರೆ.
ಚೀನಾ ಹಾಗೂ ಭಾರತದ ಸಂಬಂಧಕ್ಕೆ 2000 ವರ್ಷಗಳ ಇತಿಹಾಸವಿದೆ. ಪಲ್ಲವರ ಆಳ್ವಿಕೆಗೆ ಒಳಪಟ್ಟಿದ್ದ ಚೆನ್ನೈನಿಂದ 50 ಕಿಮೀ ದೂರವಿರುವ ಮಾಮಲ್ಲಾಪುರಂ ಹಾಗೂ ಚೀನಾದ ನಡುವೆ ಪ್ರಾಚೀನಾ ಕಾಲದಲ್ಲೇ ರಕ್ಷಣಾ ಹಾಗೂ ವ್ಯಾಪಾರ ಒಪ್ಪಂದ ನಡೆದಿತ್ತು ಎನ್ನಲಾಗಿದೆ. ಉತ್ಪನ್ನದ ವೇಳೆ ಲಭಿಸಿರುವ ನಾಣ್ಯಗಳು ಮತ್ತು ಚಿಹ್ನೆಗಳು ಇದನ್ನು ದೃಢಪಡಿಸಿವೆ. ಪಲ್ಲವರಿಗೂ ಮುನ್ನವೇ ಅಸ್ತಿತ್ವದಲ್ಲಿದ್ದ ಈ ಪಟ್ಟಣ, ಭಾರತ ಮತ್ತು ಚೀನಾ ನಡುವೆ ರೇಷ್ಮೆ ಹಾಗೂ ಸಂಬಾರ ಪದಾರ್ಥಗಳನ ವ್ಯಾಪಾರದಲ್ಲಿ ಮುಖ್ಯ ಪಾತ್ರವಹಿಸಿತ್ತು. ಕ್ಸಿ ಅವರಿಗೆ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿಯಿರುವುದರಿಂದ ಐತಿಹಾಸಿಕ ಊರನ್ನೇ ಮೋದಿ ಈ ಭೇಟಿಗೆ ಆಯ್ಕೆ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ