ಏನಿದು ಅರೆಸ್ಟೆಡ್ ಲ್ಯಾಂಡಿಂಗ್, ಭಾರತೀಯ ನೌಕಾಪಡೆಗೆ ಇದರಿಂದೇನು ಲಾಭ?

ಗೋವಾದಲ್ಲಿ ನಡೆದ ತೇಜಸ್ ಲಘು ಯುದ್ಧ ವಿಮಾನದ ಅರೆಸ್ಟೆಡ್ ಲ್ಯಾಂಡಿಂಗ್ ಇದೀಗ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸಾಮರ್ಥ್ಯ ಇರುವ ಯುದ್ಧ ವಿಮಾನಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಶೀಘ್ರದಲ್ಲೇ ಭಾರತ ಸೇರ್ಪಡೆಯಾಗಲಿದೆ.
ತೇಜಸ್ ವಿಮಾನ
ತೇಜಸ್ ವಿಮಾನ

ಯುದ್ಧವಿಮಾನ ವಾಹಕಗಳಲ್ಲಿ ಉಪಯೋಗ, ಕಡಿಮೆ ಗಾತ್ರದ ರನ್ ವೇಗಳಲ್ಲೂ ವಿಮಾನ ಇಳಿಕೆಗೆ ಸಹಕಾರಿ

ನವದೆಹಲಿ: ಗೋವಾದಲ್ಲಿ ನಡೆದ ತೇಜಸ್ ಲಘು ಯುದ್ಧ ವಿಮಾನದ ಅರೆಸ್ಟೆಡ್ ಲ್ಯಾಂಡಿಂಗ್ ಇದೀಗ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸಾಮರ್ಥ್ಯ ಇರುವ ಯುದ್ಧ ವಿಮಾನಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಶೀಘ್ರದಲ್ಲೇ ಭಾರತ ಸೇರ್ಪಡೆಯಾಗಲಿದೆ.

ಏನಿದು ಅರೆಸ್ಟೆಡ್ ಲ್ಯಾಂಡಿಂಗ್?
ವೇಗವಾಗಿ ಹಾರಾಟ ನಡೆಸುವ ಯುದ್ಧ ವಿಮಾನವನ್ನು ಅತ್ಯಂತ ಕಡಿಮೆ ಅಂತರದಲ್ಲಿಸುರಕ್ಷಿತವಾಗಿ ಇಳಿಸುವ ಪರೀಕ್ಷೆಯೇ ಅರೆಸ್ಟೆಡ್ ಲ್ಯಾಂಡಿಂಗ್. ಯುದ್ಧವಿಮಾನ ವಾಹಕ ನೌಕೆಯಿಂದ ಹಾರುವ ಯುದ್ಧ ವಿಮಾನ ಕಾರ್ಯಾಚರಣೆಯ ಬಳಿಕ ನೌಕೆಯ ನಿಗದಿತ ಸ್ಥಳದಲ್ಲಿಇಳಿಯಬೇಕಾದ್ದರಿಂದ ನೌಕಾಪಡೆಯಲ್ಲಿ ಬಳಕೆಯಾಗುವ ವಿಮಾನಗಳಿಗೆ ಈ ಕಸರತ್ತು ಅತ್ಯಂತ ಮುಖ್ಯ. ಇದೀಗ ಗೋವಾದ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಹಡಗು ಕಟ್ಟೆಯಲ್ಲಿರುವಂತೆ ಕಿರಿದಾದ ಜಾಗದಲ್ಲಿ ವೇಗವಾಗಿ ಹಾರಿ ಬಂದ ತೇಜಸ್‌ ಸುರಕ್ಷಿತವಾಗಿ ಇಳಿದು ನಿಲ್ಲುವ ಮೂಲಕ ತನ್ನ ಈ ಸಾಮರ್ಥ್ಯವನ್ನು ಸಾಬೀತು ಮಾಡಿದೆ.

ಈ ಹಿಂದೆ ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್‌ ಹಾಗೂ ಇತ್ತೀಚೆಗೆ ಚೀನಾದ ಕೆಲವೇ ಯುದ್ಧ ವಿಮಾನಗಳು ಮಾತ್ರ ಇಂತಹ ಪರೀಕ್ಷೆಯಲ್ಲಿ ಯಶಸ್ವಿಯಾಗಿವೆ. 

ಅರೆಸ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಹೇಗೆ..?
ನೌಕಾಪಡೆ ಆವೃತ್ತಿಯ ವಿಮಾನದ ತಳಭಾಗದಲ್ಲಿ ಕೊಂಡಿ ಒಂದನ್ನು ಅಳವಡಿಸಲಾಗಿರುತ್ತದೆ. ವಿಮಾನವು ಇಳಿಯುವ ಜಾಗದಲ್ಲಿ ಅಡ್ಡವಾಗಿ ಒಂದು ಬಲಿಷ್ಠವಾದ ಹಗ್ಗವನ್ನು ಕಟ್ಟಿರಲಾಗುತ್ತದೆ. ವೇಗವಾಗಿ ಬರುವ ವಿಮಾನವು ಹಡಗಿನ ಮೇಲೆ ಇಳಿದು, ಮುಂದೆ ಸಾಗುತ್ತಿದ್ದಂತೆ ತಳಭಾಗದಲ್ಲಿರುವ ಕೊಂಡಿಯು ಹಗ್ಗಕ್ಕೆ ಸಿಲುಕಿ, ವಿಮಾನದ ವೇಗವನ್ನು ತಡೆದು, ಸ್ವಲ್ಪವೇ ದೂರದಲ್ಲಿ ಅದು ನಿಲ್ಲುವಂತೆ ಮಾಡುತ್ತದೆ. ಇದನ್ನು ಅರೆಸ್ಟ್‌ ಲ್ಯಾಂಡಿಂಗ್‌ ಎನ್ನುತ್ತಾರೆ. ಹಡಗಿನ ಮೇಲೆ ಸ್ವಲ್ಪವೇ ರನ್‌ವೇ ಇರುವುದರಿಂದ, ಯುದ್ಧ ವಿಮಾನ ಇಳಿಯುತ್ತಿದ್ದಂತೆ ವೇಗವನ್ನು ತಡೆದು ಸ್ವಲ್ಪ ದೂರದಲ್ಲೇ ನಿಲ್ಲಿಸುವುದು ಅಗತ್ಯ. ‘ತೇಜಸ್‌’ನ ನೌಕಾಪಡೆ ಆವೃತ್ತಿಯಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು ಗೋವಾದಲ್ಲಿ ಹಲವು ಬಾರಿ ಇದನ್ನು ಪರೀಕ್ಷಿಸಲಾಗಿದೆ. ಒಬ್ಬನೇ ವ್ಯಕ್ತಿ ಪ್ರಯಾಣಿಸಬಹುದಾದಂಥ ಎರಡು ‘ತೇಜಸ್‌’ ವಿಮಾನಗಳನ್ನು ನೆಲದ ಮೇಲೆ ನಿಗದಿತ ಪ್ರದೇಶದೊಳಗೆ ಅನೇಕ ಬಾರಿ ಯಶಸ್ವಿಯಾಗಿ ಇಳಿಸಲಾಗಿದೆ.

ಭಾರತೀಯ ನೌಕಾಪಡೆಗೆ ಇದರಿಂದೇನು ಲಾಭ?

ಪ್ರಮುಖ ಕಾರ್ಯಾಚರಣೆಗಳ ಸಂದರ್ಭದಲ್ಲಿ ಯುದ್ಧ ವಿಮಾನಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಆದರೆ ದೂರದ ಪ್ರದೇಶಗಳಿಗೆ ಇವುಗಳ ರವಾನೆ ಮಾಡಲು ಮತ್ತು ಅಲ್ಲಿ ಕಾರ್ಯಾಚರಣೆ ನಡೆಸಲು ಇವುಗಳ ಇಂಧನ ಸಾಮರ್ಥ್ಯ ಸಾಲುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಯುದ್ದ ವಿಮಾನ ವಾಹಕ ನೌಕೆಗಳ ನೆರವು ಅನಿವಾರ್ಯವಾಗುತ್ತದೆ. ಆದರೆ ಯುದ್ಧ ವಿಮಾನ ವಾಹಕಗಳಲ್ಲಿನ ರನ್ ವೇ ಸಾಮಾನ್ಯ ರನ್ ವೇ ಗಳಂತೆ ಇರುವುದಿಲ್ಲ. ಗಾತ್ರ ಮತ್ತು ಉದ್ಧದ ಪ್ರಮಾಣದಲ್ಲಿ ತುಂಬಾ ಚಿಕ್ಕದಾಗಿದ್ದು, ಈ ಚಿಕ್ಕ ರನ್ ವೇಯಲ್ಲಿಯೇ ಯುದ್ಧ ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ತೇಜಸ್ ವಿಮಾನದ ಅರೆಸ್ಟೆಡ್ ಲ್ಯಾಂಡಿಂಗ್ ಮುಖ್ಯವಾಗಿದೆ.

ಮುಂದಿನ ನಡೆ?
ಪ್ರಸ್ತುತ ತೇಜಸ್ ಯುದ್ದ ವಿಮಾನದ ಮೊದಲ ಹಂತದ ಅರೆಸ್ಟ್ ಲ್ಯಾಂಡಿಂಗ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಆದರೆ ಮುಂದಿನ ಹಂತದ ಪರೀಕ್ಷೆ ಅತ್ಯಂತ ನಿರ್ಣಾಯಕವಾಗಿದ್ದು, ಮುಂದಿನ ಬಾರಿ ಇದೇ ಪರೀಕ್ಷೆಯನ್ನು ಯುದ್ಧವಿಮಾನ ವಾಹಕ ನೌಕೆಯಲ್ಲಿ ನಡೆಸಲಾಗುತ್ತದೆ. ಮೂಲಗಳ ಪ್ರಕಾರ ಐಎನ್ಎಸ್ ವಿಕ್ರಮಾಧಿತ್ಯ ವಿಮಾನ ವಾಹಕ ಯುದ್ಧ ನೌಕೆಯಲ್ಲಿ ತೇಜಸ್ ಯುದ್ಧ ವಿಮಾನವನ್ನು ಮತ್ತೆ ಇದೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಆ ಪರೀಕ್ಷೆಯಲ್ಲೂ ತೇಜಸ್ ಯಶಸ್ವಿಯಾದರೆ ಆಗ ಭಾರತ ಕೂಡ ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್‌ ಮತ್ತು ಚೀನಾ ದೇಶಗಳ ಸಾಲಿಗೆ ಸೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com